ವಿಧಾನಸಭಾ ಚುನಾವಣೆಗೂ ಮುನ್ನವೇ ಅಪ್ಪಳಿಸಲಿದೆ ದೇವೇಗೌಡರ 'ಅಗ್ನಿ ದಿವ್ಯ'

31 Jan 2018 3:54 PM | General
583 Report

ದೇವೇಗೌಡರ ಆತ್ಮಚರಿತ್ರೆಯ ಬಗ್ಗೆ ವಿವರಗಳನ್ನು ನೀಡಿದ ವೈಎಸ್ ವಿ ದತ್ತ. ಆತ್ಮಚರಿತ್ರೆಯ ಮುಖ್ಯಾಂಶಗಳೇನು? ವಿವರಗಳನ್ನು ಅಕ್ಷರಕ್ಕೆ ಇಳಿಸಿದವರು ದತ್ತ ಒಬ್ಬರೇನಾ? ಪ್ರಕಾಶಕರು ಯಾರು, ಎಷ್ಟು ಪುಟಗಳಾಗಿವೆ ಇತ್ಯಾದಿ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.

ದೇವೇಗೌಡರ ಆತ್ಮಚರಿತ್ರೆಗೆ 'ಅಗ್ನಿ ದಿವ್ಯ' ಎಂದು ಹೆಸರಿಡಲು ನಿರ್ಧರಿಸಿದ್ದೀವಿ. ಈ ಫೆಬ್ರವರಿಯ ಮೊದಲ ವಾರದಲ್ಲಿ ಬಿಡುಗಡೆ ಮಾಡಬೇಕು. ಎರಡನೇ ವಾರದೊಳಗೆ ಎಲ್ಲರಿಗೂ ಅದು ತಲುಪಬೇಕು ಎಂದರು ಕಡೂರು ಶಾಸಕ- ದೇವೇಗೌಡರ ಆತ್ಮಚರಿತೆಯಲ್ಲಿ ಸಾರ್ವಜನಿಕ ಬದುಕಿನ ಭಾಗಕ್ಕೆ ಅಕ್ಷರ ರೂಪ ನೀಡಿರುವ ವೈಎಸ್ ವಿ ದತ್ತ.ದೇವೇಗೌಡರ ಸಾರ್ವಜನಿಕ ಬದುಕಿನ ಬಗ್ಗೆ ಅವರು ತಿಳಿಸಿದ ಘಟನೆ, ಸಂಗತಿಗಳಿಗೆ ಅಕ್ಷರ ರೂಪ ನೀಡುವ ಕೆಲಸ ಮಾಡಿದ್ದೀನಿ. ಅರವತ್ತು ವರ್ಷಗಳ ಸುದೀರ್ಘ ಸಾರ್ವಜನಿಕ ಬದುಕಿನ ನೆನಪು-ಘಟನೆಗಳನ್ನು ಅವರು ಹೆಕ್ಕಿ-ಹೆಕ್ಕಿ ಹೇಳಿದ್ದಾರೆ. ಇನ್ನು ದೇವೇಗೌಡರ ಬಾಲ್ಯ-ವಿದ್ಯಾಭ್ಯಾಸ- ಕೌಟುಂಬಿಕ ಜೀವನದ ಬಗ್ಗೆ ಗೌಡರ ಮಗಳು ಡಾ.ಶೈಲಜಾ ಅಕ್ಷರ ರೂಪ ನೀಡಿದ್ದಾರೆ.ಪುಸ್ತಕ ಪೂರ್ತಿ ಆಗಿದೆ,ಒಟ್ಟು ಸೇರಿ ಐನೂರು ಪುಟಗಳಾಗಬಹುದು. ಆದರೆ ಮುದ್ರಕರು ಇನ್ನೂ ಅಂತಿಮವಾಗಿಲ್ಲ. ಯಾರಾದರೂ ಪಬ್ಲಿಷ್ ಮಾಡುವುದಕ್ಕೆ ಬಂದರೆ ಯೋಚನೆ ಮಾಡ್ತೀವಿ. ಆದರೆ ದೇವೇಗೌಡರಿಗೆ ಅದನ್ನು ತಾವೇ ಸ್ವತಃ ಪಬ್ಲಿಷ್ ಮಾಡಿಸಬೇಕು ಅಂತಿದೆ. ಪಬ್ಲಿಷರ್ಸ್ ಮುಂದೆ ಬಂದರೆ ಅವರಿಗೇ ಕೊಡ್ತೀವಿ. ಆದರೆ ಯಾರು ಬರಲಿ, ಬಾರದಿರಲಿ. ಅದನ್ನು ಜನರಿಗೆ ಮುಟ್ಟಿಸುತ್ತೇವೆ.ಅಗ್ನಿದಿವ್ಯ ಎಂಬ ಹೆಸರಿಟ್ಟಿದ್ದೀವಿ. 1933ರಲ್ಲಿ ದೇವೇಗೌಡರು ಹುಟ್ಟಿದ್ದು. 1957ರಲ್ಲಿ ಸಾರ್ವಜನಿಕ ಜೀವನಕ್ಕೆ ಬಂದರು. ಅಲ್ಲಿಂದ 2013ರವರೆಗೆ ಅವರ ಸಾರ್ವಜನಿಕ ಬದುಕು, ಏಳು- ಬೀಳು ಎಲ್ಲವೂ ದಾಖಲಾಗಿದೆ ವೈಎಸ್ ವಿ ದತ್ತ ಹೇಳಿದರು.

ನೂರಾರು- ಸಾವಿರಾರು ಘಟನೆಗಳಿವೆ. ಒಂದಕ್ಕೊಂದು ತಳಕು ಹಾಕಿಕೊಂಡು, ಮತ್ತೊಂದರಲ್ಲಿ ಹಾಸುಹೊಕ್ಕಾಗಿದೆ. ಹಲವು ಘಟನೆಗಳು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿವೆ. ದೇವೇಗೌಡರಿಗೆ ದೇವರಲ್ಲಿ ಇರುವ ನಂಬಿಕೆ, ಜ್ಯೋತಿಷ್ಯದ ಬಗೆಗಿನ ನಂಬಿಕೆ, ಅವರಿಗೆ ಇಷ್ಟು ಹಠ ಏಕೆ? ಆ ಗುಣ ಅವರಲ್ಲಿ ಕಾಣಿಸಿಕೊಂಡಿದ್ದು ಯಾವಾಗ? ದೇವೇಗೌಡರು- ರಾಮಕೃಷ್ಣ ಹೆಗಡೆ ಮಧ್ಯದ ವಿಚಾರ, ಸಿದ್ದರಾಮಯ್ಯ ಅವರನ್ನು ಮುಂಚೂಣಿಗೆ ತಂದಿದ್ದು,ಒಟ್ಟಾರೆ ರಾಜಕಾರಣ ಅಭ್ಯಾಸ ಮಾಡುವವರಿಗೆ, ಕುತೂಹಲಿಗಳಿಗೆ, ಇತಿಹಾಸ ತಜ್ಞರಿಗೆ ಎಲ್ಲರಿಗೂ ಇದೊಂದು ಪಠ್ಯಪುಸ್ತಕದಂತೆ ಆಗುತ್ತದೆ.ದೇವೇಗೌಡರು ಸಚಿವರಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಒಟ್ಟಾರೆಯಾಗಿ ಅಧಿಕಾರ ನಡೆಸಿರುವ ಕಾಲ ಐದು ವರ್ಷವೂ ಮುಟ್ಟಲ್ಲ. ಅವರದೇನಿದ್ದರೂ ಹೋರಾಟದ ಬದುಕು. ಜನರು ಹಾಗೂ ಕಾಲ ಪರೀಕ್ಷೆ ಎಂಬ ಬೆಂಕಿಯಲ್ಲಿ ಎದ್ದು ಬಂದ ವ್ಯಕ್ತಿ ಅವರು. ಆ ಕಾರಣಕ್ಕೆ ಅಗ್ನಿ ದಿವ್ಯ ಎಂಬ ಹೆಸರನ್ನು ಇಟ್ಟಿದ್ದೀವಿ ಎಂದರು.

ದೇವೇಗೌಡರ ತಂದೆ ಈಶ್ವರನ ಆರಾಧಕರು. ಅವರ ಇಡೀ ಕುಟುಂಬ ಶಿವನ ಆರಾಧಕರು. ದೇವೇಗೌಡರು ಪಂಚೆ ಕಟ್ಟಿ, ಹೆಗಲ ಮೇಲೆ ಟವೆಲ್ ಹಾಕಿಕೊಂಡು ಪಾದಯಾತ್ರೆ ಹೊರಟರೆಂದರೆ ಅದು ಶಿವ ತಾಂಡವವೇ. ಅವರ ಹಠ, ಸಿಟ್ಟು, ಆವೇಶ ಎಲ್ಲವೂ ಶಿವನನ್ನು ನೆನಪಿಸುತ್ತವೆ.ಒಟ್ಟು ಮೂರು ಭಾಗ ಇದೆ. ಆ ಪೈಕಿ ದೇವೇಗೌಡರು ಬರೆದ ಪತ್ರಗಳು, ಹೊರಡಿಸಿದ ಆದೇಶ ಮತ್ತಿತರ ವಿವರಗಳ ಸವಿಸ್ತಾರವಾದ ಭಾಗ ಇದೆ. ಯಾರೂ ಅವರ ಬಗ್ಗೆ ಆರೋಪ ಮಾಡಬಾರದು. ಸಾಕ್ಷಿ ಇಲ್ಲದೆ ಗೌಡರು ಏನೋ ಬರೆದರು ಎಂದು ದೂರಬಾರದು. ಆ ಕಾರಣಕ್ಕೆ ಸಾಕ್ಷ್ಯ ಸಹಿತ ಬರೆಯಲಾಗಿದೆ.ಒಂದೂವರೆ ವರ್ಷದ ಹಿಂದೆ ಈ ಬಗ್ಗೆ ಹೇಳಿದರು. ನಾನು ಬರೆಯಲು ಆರಂಭಿಸಿದ್ದು ಆಗಸ್ಟ್ 2017ರಲ್ಲಿ. ಪೂರ್ತಿ ಆಗಿದ್ದು ಡಿಸೆಂಬರ್ 2017ರಲ್ಲಿ. ಅಂಥ ಮಹನೀಯರ ಆತ್ಮಚರಿತ್ರೆಗೆ ಅಕ್ಷರ ರೂಪ ನೀಡುವ ಅವಕಾಶ ಸಿಕ್ಕಿದ್ದು ನನ್ನ ಸುಯೋಗ. ಅವರ ಅದ್ಭುತವಾದ ನೆನಪಿನ ಶಕ್ತಿ, ನಲವತ್ತು ವರ್ಷಗಳ ನಮ್ಮಿಬ್ಬರ ಒಡನಾಟ ಎಲ್ಲವೂ ಸಹಾಯಕ್ಕೆ ಬಂದಿದೆ.ಶತಾಯಗತಾಯ ಫೆಬ್ರವರಿ ಮೊದಲ ವಾರದಲ್ಲಿ ಬಿಡುಗಡೆ ಮಾಡುವುದು ನಮ್ಮ ಉದ್ದೇಶ. ಈ ಚುನಾವಣೆಗೆ ಮುನ್ನವೇ ಜನರಿಗೆ ತಲುಪಿಸಬೇಕು. ನಾವು ರಾಜಕೀಯವಾಗಿ ತುಂಬ ಸಂಕೀರ್ಣ ಕಾಲಘಟ್ಟದಲ್ಲಿ ಇದ್ದೀವಿ. ದೇವೇಗೌಡರ ಹೋರಾಟ, ರಾಜ್ಯದ ಬಗೆಗಿನ ಪ್ರೀತಿ ಜನರಿಗೆ ತಿಳಿಯಬೇಕು. ನೂರಕ್ಕೆ ನೂರು ಫೆಬ್ರವರಿಯಲ್ಲಿ ಬಿಡುಗಡೆ ಮಾಡೇ ಮಾಡ್ತೀವಿ ಎಂದು ವೈಎಸ್ ವಿ ದತ್ತ ಹೇಳಿದರು.

Edited By

Shruthi G

Reported By

Shruthi G

Comments