ಮೈಸೂರು ಪರಿವರ್ತನಾ ಯಾತ್ರೆಯಲ್ಲಿ ಆರ್ಭಟಿಸಿದ ಅಮಿತ್ ಷಾ

25 Jan 2018 4:58 PM | General
437 Report

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತೆತ್ತಿದರೆ ಲೆಕ್ಕ ಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡುತ್ತಾರೆ. ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕರ್ನಾಟಕಕ್ಕೆ 2 ಲಕ್ಷದ 19 ಸಾವಿರದ 506 ಕೋಟಿ ಅನುದಾನವನ್ನು ನೀಡಲಾಗಿದೆ.

 ಇದರಲ್ಲಿ 1 ಲಕ್ಷದ 36 ಸಾವಿರ ಕೋಟಿ ಕಾಂಗ್ರೆಸಿಗರ ಕೈ ಸೇರಿದೆ ಎಂದು ದೂರಿದರು. ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ತಮ್ಮ ಭಾಷಣದುದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಐದು ವರ್ಷಗಳ ಹಿಂದೆ ಕಾಂಗ್ರೆಸ್ ನಾಯಕರ ಬಳಿ ಒಂದಂತಸ್ತಿನ ಮನೆ ಹಾಗೂ ದ್ವಿಚಕ್ರ ವಾಹನವಿತ್ತು. ಇವತ್ತು ಅವರ ಬಳಿ ನಾಲ್ಕು ಅಂತಸ್ತಿನ ಮನೆಗಳು, ವಿದೇಶಿ ಕಾರು ಸೇರಿದಂತೆ ಬೆಲೆಬಾಳುವ ವಸ್ತುಗಳು ಇವೆ. ಇದಕ್ಕೆ ಹಣ ಎಲ್ಲಿಂದ ಬಂತು ಎಂದು ಪ್ರಶ್ನೆ ಮಾಡಿದರು.

ಹಿಂದಿನ ಯುಪಿಎ ಸರ್ಕಾರ ಕರ್ನಾಟಕಕ್ಕೆ ಐದು ವರ್ಷದಲ್ಲಿ ನೀಡಿದ್ದು 88,500 ಕೋಟಿ. ಪ್ರಧಾನಮಂತ್ರಿ ನರೇಂದ್ರ ಮೋದಿ ಕರ್ನಾಟಕಕ್ಕೆ ನೀಡಿರುವ ಹಣ ನಿಮಗೆ ಬಂದಿದೆಯೇ, ನಿಮ್ಮ ಗ್ರಾಮಗಳು ಅಭಿವೃದ್ಧಿಯಾಗಿವೆಯೇ ಎಂದು ನೆರೆದಿದ್ದ ಜನರನ್ನು ಪ್ರಶ್ನಿಸಿದಾಗ ಇಲ್ಲ ಎಂದು ಉತ್ತರ ಬಂದಿತು.
ಕಾಂಗ್ರೆಸಿಗರು ಎಂತಹ ಭ್ರಷ್ಟರು ಎಂದರೆ ಅಕ್ಕಿ, ಹಾಸಿಗೆ ಯಾವುದರಲ್ಲೂ ಬಿಡುವುದಿಲ್ಲ. ಭ್ರಷ್ಟಾಚಾರದಿಂದಲೇ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡಿದ್ದರೂ ಇನ್ನೂ ಎಚ್ಚೆತ್ತುಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು. ಕರ್ನಾಟಕದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ನಾನು ಹೇಳಿದರೆ ಒಂದು ವಾರ ಬೇಕಾಗುತ್ತದೆ. ಅಷ್ಟು ದಾಖಲೆಗಳು ನನ್ನ ಬಳಿ ಇವೆ. ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಮನೆಯಲ್ಲಿ ಡೈರಿ ಸಿಕ್ಕ ನಂತರ ಕಾಂಗ್ರೆಸ್ ನಾಯಕರಿಗೆ ನಿದ್ದೆ ಬರುತ್ತಿಲ್ಲ ಎಂದು ವ್ಯಂಗ್ಯವಾಡಿದರು.

Edited By

Suresh M

Reported By

Suresh M

Comments