ಕೇಂದ್ರ ಸರ್ಕಾರದಿಂದ 40 ಎಲೆಕ್ಟ್ರಿಕ್ ಬಸ್ ಗಳಿಗೆ ಗ್ರೀನ್ ಸಿಗ್ನಲ್

22 Jan 2018 11:10 AM | General
270 Report

ಕೇಂದ್ರ ಸರ್ಕಾರ ಬಿಎಂಟಿಸಿಯ 40 ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸಲು ಅನುಮೋದನೆ ನೀಡಿದೆ. ಬಿಎಂಟಿಸಿ ಫೇಮ್ ಇಂಡಿಯಾ' ಯೋಜನೆಯಡಿ ನಗರದಲ್ಲಿ ಎಲೆಕ್ಟ್ರಿಕ್ ಬಸ್ ಅರಂಭಿಸಲು ಉದ್ದೇಶಿಸಿರುವ ಯೋಜನೆಗೆ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಕೇಂದ್ರ ಸರ್ಕಾರ 150 ಬಸ್ ಗಳ ಪೈಕಿ ಸದ್ಯಕ್ಕೆ 40 ಬಸ್ ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲು ಅನುಮೋದನೆ ನೀಡಿದೆ.

ಈ ಹಿನ್ನೆಲೆಯಲ್ಲಿ ಈ ವರ್ಷದ ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ನಲ್ಲಿ 40 ಎಲೆಕ್ಟ್ರಿಕ್ ಬಸ್ ಗಳನ್ನು ರಸ್ತೆಗಿಳಿಸಲು ಬಿಎಂಟಿಸಿ ಸಿದ್ಧತೆ ನಡೆಸಿದೆ. ಇನ್ನುಳಿದ 110 ಬಸ್ ಗಳಿಗೆ ಹಂತ ಹಂತವಾಗಿ ಅನುಮತಿ ಪಡೆಯಲು ಉದ್ದೇಶಿಸಲಾಗಿದೆ.ನಗರದಲ್ಲಿ 150 ಎಲೆಕ್ಟ್ರಿಕ್ ಬಸ್ ಗಳ ಸೇವೆ ನೀಡಲು ಬಿಎಂಟಿಸಿ ಹಿಂದಿನ ತಿಂಗಳು ಟೆಂಡರ್ ಕರೆದಿತ್ತು. ಇದರ ಸಾಧಕ-ಬಾಧಕಗಳನ್ನು ಪರಿಶೀಲಿಸಿರುವ ಕೇಂದ್ರ ಸರ್ಕಾರ ಸದ್ಯಕ್ಕೆ ೪೦ ಬಸ್ ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲು ಅನುಮೋದನೆ ನೀಡಿದೆ.150 ಎಲೆಕ್ಟ್ರಿಕ್ ಬಸ್ ಗಳು ಒಂದೇ ಬಾರಿಗೆ ರಸ್ತೆಗಿಳಿಯುವ ನಿರೀಕ್ಷೆಯಿತ್ತು. ಆದರೆ ಯೋಜನೆಯಲ್ಲಿರುವ ಅವಕಾಶದಂತೆ ಮೊದಲಿಗೆ ೪೦ ಬಸ್ ಗಳನ್ನು ಮಾತ್ರ ಪಡೆಯಲಾಗುತ್ತಿದೆ. ಫೆ.19ರಂದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ನಂತರ ಕೆಲವೇ ದಿನಗಳಲ್ಲಿ ಅರ್ಹ ಗುತ್ತಿಗೆದಾರರನ್ನು ಅಂತಿಮಗೊಳಿಸಲಾಗುತ್ತದೆ. ಬಸ್ ಪೂರೈಸಲು ಆರು ತಿಂಗಳ ಅವಕಾಶವಿದೆ. ಈ ಅವಧಿ ಪೂರ್ಣಗೊಂಡ ಬಳಿಕವೇ ಬಸ್ ಗಳನ್ನು ಕಾರ್ಯಾಚರಣೆಗೆ ಇಳಿಸಲಾಗುತ್ತದೆ.

ಶಾರ್ಟ್ ಮೊಬಿಲಿಟಿ ಸ್ಕೀಮ್ ನಲ್ಲಿ ೪೦ ಬಸ್ ಗಳನ್ನು ಪಡೆಯಲು ಅನುಮೋದನೆ ದೊರೆತಿದೆ. ಈ ವಿಧಾನದಲ್ಲಿ ಎಲ್ಲ ನಗರಗಳಿಗೂ 40 ಬಸ್ ಗಳನ್ನು ಖರೀದಿ ಅಥವಾ ಗುತ್ತಿಗೆ ಆಧಾರದಲ್ಲಿ ಪಡೆಯಲು ಅನುಮೋದನೆ ನೀಡಲಾಗುತ್ತಿದೆ.ಗುತ್ತಿಗೆದಾರರಿಗೆ ಬಿಎಂಟಿಸಿ ಕೆಲವು ಷರತ್ತುಗಳನ್ನು ವಿಧಿಸಿದೆ. 5 ವರ್ಷಗಳಲ್ಲಿ 300 ಬಸ್ ಗಳನ್ನು ಚಲಾಯಿಸಿ ಸೇವೆ ನೀಡಿದ ಅನುಭವವಿರಬೇಕು, ತಿಂಗಳಿಗೆ 25ಬಸ್ ಉತ್ಪಾದಿಸುವ ಸಾಮರ್ಥ್ಯವಿರಬೇಕು. ವಾರ್ಷಿಕ ಕನಿಷ್ಠ275 ಕೋಟಿ ರೂ. ವಹಿವಾಟು ಸಾಮರ್ಥ್ಯವಿರಬೇಕು ಎಂದು ಷರತ್ತು ವಿಧಿಸಿದೆ.ಬಸ್ ಗಳನ್ನು ಬಿಎಂಟಿಸಿ ಚಾಲಕರು ಚಾಲನೆ ಮಾಡುವಂತಿಲ್ಲ. ಗುತ್ತಿಗೆ ಪಡೆಯುವ ಸಂಸ್ಥೆಯ ತರಬೇತಿ ನೀಡಿದ ತಮ್ಮದೇ ಚಾಲಕರನ್ನು ಇದಕ್ಕೆ ನೇಮಿಸಲಿದೆ. ಇದರ ಜತೆಗೆ ಬಿಎಂಟಿಸಿ ಡಿಪೋದಲ್ಲಿ ಚಾರ್ಜಿಂಗ್ ವ್ಯವಸ್ಥೆಯನ್ನೂ ಮಾಡಿಕೊಳ್ಳಬೇಕು. ಪ್ರತಿ ಕಿ.ಮೀ ದರ ಹಾಗೂ ವಿದ್ಯುತ್ ವೆಚ್ಚವನ್ನು ಬಿಎಂಟಿಸಿ ಭರಿಸಲಿದೆ.

Edited By

Shruthi G

Reported By

Shruthi G

Comments