ಅಕ್ರಮ ಗೋ ಸಾಗಾಣಿಕೆಯನ್ನು ಬಯಲಿಗೆಳೆದ ಬಿಜೆಪಿ ಸಂಸದ ಪ್ರತಾಪ್ ಸಿಂಹ

18 Jan 2018 1:19 PM | General
353 Report

ಚಿತ್ರದುರ್ಗ ಜಿಲ್ಲೆಯ ಗಿದೋಬನಹಳ್ಳಿ ಬಳಿ ಹೈವೆಯ ಪಕ್ಕದ ಡಾಬಾ ಒಂದರ ಬಳಿ ನಿಂತಿದ್ದ ಲಾರಿಯೊಂದರಲ್ಲಿ ಅಕ್ರಮವಾಗಿ ಎತ್ತುಗಳು, ಮತ್ತು ಎಮ್ಮೆಗಳನ್ನು ಅಕ್ರಮವಾಗಿ ಮಾಡುತ್ತಿದ್ದುದನ್ನು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ತಡೆದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಕುಷ್ಟಗಿಯಲ್ಲಿ ಪಕ್ಷದ ಕಾರ್ಯಕ್ರಮ ಮುಗಿಸಿಕೊಂಡು ಅದೇ ಡಾಬಾ  ಬಳಿ ಊಟಕ್ಕೆಂದು ಬೆಂಬಲಿಗರೊಂದಿಗೆ  ಬಂದಿದ್ದ ಪ್ರತಾಪ್ ಸಿಂಹ ಅವರಿಗೆ ಲಾರಿಯಲ್ಲಿ ಎತ್ತುಗಳಿದ್ದುದರ ಸುಳಿವು ದೊರೆತು ಲಾರಿ ಚಾಲಕನನ್ನು ತರಾಟೆಗೆ ತೆಗೆದುಕೊಂಡು ಕೊನೆಗೆ ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಲಾರಿಯಲ್ಲಿ ತೀರ್ವ ಒತ್ತೊತ್ತಾಗಿ 10 ಕ್ಕೂ ಹೆಚ್ಚು ಎತ್ತುಗಳನ್ನು ಮತ್ತು 4-5 ಎಮ್ಮೆಗಳನ್ನು ಅಮಾನವೀಯವಾಗಿ ಕಟ್ಟಿ ಸಾಗಿಸಲಾಗುತ್ತಿತ್ತು, ಲಾರಿ ಚಾಲಕನನ್ನು ಈ ಬಗ್ಗೆ ಪ್ರಶ್ನಿಸಿದಾಗ ಜಾನುವಾರುಗಳನ್ನು ದಾವಣಗೆರೆಯ ಚನ್ನಗಿರಿಯಿಂದ ಸಂತೆಗೆ ಕೊಂಡು ಒಯ್ಯುತ್ತಿರುವಾಗಿ ಹೇಳಿದ್ದಾನೆ, ಜಾನುವಾರುಗಳನ್ನು ಸಾಗಿಸಲು ಅವಶ್ಯಕವಾದ ದಾಖಲೆಗಳನ್ನು ಕೇಳಿದರೆ ಚಾಲಕ ಯಾವುದೇ ದಾಖಲೆಗಳನ್ನು ನೀಡದೆ, ತನಗೆ ಪ್ರಭಾವಿಗಳು ಪರಿಚಯವಿರುವುದಾಗಿ ಹೇಳಿದ್ದಾನೆ.

ಇದರಿಂದ ಕೆರಳಿದ ಸಂಸದರು ಚಿತ್ರದುರ್ಗ ಎಸ್ಪಿಗೆ ಕರೆ ಮಾಡಿ ಸ್ಥಳೀಯ ಪೊಲೀಸರನ್ನು ಸ್ಥಳಕ್ಕೆ ಕಳಿಸುವಂತೆ ಮನವಿ ಮಾಡಿದರು. ಈ ನಡುವೆ ಅನುಚಿತವಾಗಿ ವರ್ತಿಸಿದ ಲಾರಿ ಚಾಲಕನಿಗೆ ಪ್ರತಾಪ್ ಸಿಂಹ ಬೆಂಬಲಿಗರು ಬಿಸಿ ಮುಟ್ಟಿಸಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಜಾನುವಾರು ತುಂಬಿದ್ದ ಲಾರಿಯನ್ನು ಠಾಣೆಗೆ ತೆಗೆದುಕೊಂಡು ಹೋದರು. ಘಟನೆಯ ಮೂರು ವಿಡಿಯೋಗಳನ್ನು ಪ್ರತಾಪ್ ಸಿಂಹ ತಮ್ಮ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದು, ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

 

 

 

Edited By

Shruthi G

Reported By

Shruthi G

Comments