ವಿಶ್ವವಿಖ್ಯಾತ ತಾಜ್ ಮಹಲ್ ವೀಕ್ಷಣೆಯ ದರ ಇನ್ನು ದುಬಾರಿ

13 Jan 2018 10:40 AM | General
287 Report

ದೇಶೀಯ ಹಾಗೂ ವಿದೇಶಿ ಪ್ರವಾಸಿಗರ ಪ್ರವೇಶದರವನ್ನು ಎರಡು ವರ್ಷಗಳಲ್ಲಿ ಎರಡನೇ ಬಾರಿಗೆ ಏರಿಕೆ ಮಾಡುತ್ತಿರುವುದು ಪ್ರವಾಸೋದ್ಯಮ ವಲಯದ ಕೆಂಗಣ್ಣಿಗೆ ಕಾರಣವಾಗಿದೆ. ಈ ಐತಿಹಾಸಿಕ ಸ್ಮಾರಕದ ವಾಣಿಜ್ಯೀಕರಣದ ಬದಲು ದಟ್ಟಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವಂಥ ಕ್ರಮಕ್ಕೆ ಒತ್ತು ನೀಡಬೇಕಾಗಿದೆ ಎಂಬ ಆಗ್ರಹ ಕೇಳಿಬಂದಿದೆ.

ಎಎಸ್‌ಐ ಪ್ರಸ್ತಾವನೆಯ ಪ್ರಕಾರ, ದೇಶಿ ಪ್ರವಾಸಿಗರು, ಸಾರ್ಕ್ ಮತ್ತು ಬಿಮ್ಸ್ಟೆಕ್ ಪ್ರವಾಸಿಗರು ಹಾಗೂ ವಿದೇಶಿ ಪ್ರವಾಸಿಗರ ಪ್ರವೇಶದರವನ್ನು ಹೆಚ್ಚಿಸಲಾಗುತ್ತಿದೆ. ಆಗ್ರಾದ ಈ ಐತಿಹಾಸಿಕ ಸ್ಮಾರಕದ ಟಿಕೆಟ್ ವೆಚ್ಚದಲ್ಲಿ ಎಎಸ್‌ಐ ಹಾಗೂ ಆಗ್ರಾ ಅಭಿವೃದ್ಧಿ ಪ್ರಾಧಿಕಾರದ ಪಾಲು ಇರುತ್ತದೆ. ಪ್ರಸ್ತುತ ದೇಶಿ ಪ್ರವಾಸಿಗರಿಗೆ 40 ರೂಪಾಯಿ ಟಿಕೆಟ್ ದರ ಇದ್ದು, ಈ ಪೈಕಿ 30 ರೂಪಾಯಿ ಎಎಸ್‌ಐ ಹಾಗೂ 10 ರೂಪಾಯಿ ಎಡಿಎಗೆ ಸಲ್ಲುತ್ತದೆ. ಇದನ್ನು 50 ರೂಪಾಯಿಗೆ ಹೆಚ್ಚಿಸಲು ಉದ್ದೇಶಿಸಲಾಗಿದ್ದು, ಎಎಸ್‌ಐಗೆ 40 ರೂಪಾಯಿ ಪಾಲು ಸಿಗಲಿದೆ.

ವಿದೇಶಿ ಪ್ರವಾಸಿಗರಿಗೆ 1000 ರೂಪಾಯಿ ಶುಲ್ಕ ವಿಧಿಸಲಾಗುತ್ತಿದ್ದು, ಇದನ್ನು ಎಎಸ್‌ಐ ಹಾಗೂ ಎಡಿಎ ಸಮಾನವಾಗಿ ಹಂಚಿಕೊಳ್ಳುತ್ತದೆ. ಡಿಸೆಂಬರ್ 21ರ ಹೊಸ ಅಧಿಸೂಚನೆ ಅನ್ವಯ ಈ ದರವನ್ನು 1100 ರೂಪಾಯಿಗೆ ಹೆಚ್ಚಿಸಲಾಗಿದ್ದು, ಎಎಸ್‌ಐ ಪಾಲು 600 ರೂಪಾಯಿ ಆಗಲಿದೆ. "ಎರಡು ದಿನ ಹಿಂದೆ ನಮಗೆ ಅಧಿಸೂಚನೆ ಪ್ರತಿ ಸಿಕ್ಕಿದೆ. ವಿಧಿವಿಧಾನದ ಪ್ರಕಾರ 45 ದಿನಗಳ ಕಾಲ ಆಕ್ಷೇಪಣೆ ಸಲ್ಲಿಕೆಗೆ ಅವಕಾಶವಿದೆ" ಎಂದು ಎಎಸ್‌ಐ ಕಚೇರಿಯ ಆಗ್ರಾ ವೃತ್ತದ ಅಧೀಕ್ಷಕ ಪ್ರಾಚ್ಯವಸ್ತು ತಜ್ಞ ಡಾ. ಭುವನ್ ವಿಕ್ರಮ್ ಸಿಂಗ್ ಹೇಳಿದ್ದಾರೆ. ಪ್ರವಾಸೋದ್ಯಮ ಸಂಸ್ಥೆಗಳು ಇದಕ್ಕೆ ಆಕ್ಷೇಪ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿವೆ.

Edited By

Shruthi G

Reported By

Madhu shree

Comments