ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ

12 Jan 2018 9:50 AM | General
420 Report

ಮಕರ ಸಂಕ್ರಾಂತಿ ಅಂಗವಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ, ಜ.12 ಮತ್ತು 13ರಂದು ಸುಮಾರು 200ರಿಂದ 300 ವಿಶೇಷ ಬಸ್‌ಗಳ ಸೇವೆ ಕಲ್ಪಿಸಿದೆ. ಹಬ್ಬಕ್ಕೆ ನಗರದಿಂದ ರಾಜ್ಯದ ವಿವಿಧೆಡೆ ಮತ್ತು ಅಂತರರಾಜ್ಯಗಳಿಗೆ ತೆರಳುವವರಿಗಾಗಿ ಈ ಹೆಚ್ಚುವರಿ ಸೇವೆಗಳನ್ನು ಕಲ್ಪಿಸಲಾಗಿದ್ದು, ಸಾಮಾನ್ಯ, ವೇಗದೂತ, ಕರ್ನಾಟಕ ವೈಭವ, ರಾಜಹಂಸ, ಐರಾವತ, ಐರಾವತ ಕ್ಲಬ್‌ ಕ್ಲಾಸ್‌ ಹಾಗೂ ಡೈಮಂಡ್‌ ಕ್ಲಾಸ್‌ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ.

ಈ ಬಸ್‌ಗಳು ಕೆಂಪೇಗೌಡ ಬಸ್‌ ನಿಲ್ದಾಣ, ಮೈಸೂರು ರಸ್ತೆ ಬಸ್‌ ನಿಲ್ದಾಣ ಮತ್ತು ಶಾಂತಿನಗರದ ಬಿಎಂಟಿಸಿ ಟಿಟಿಎಂಸಿ ಬಸ್‌ ನಿಲ್ದಾಣದಿಂದ ಆಚರಣೆ ಮಾಡಲಿವೆ. ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಈ ಹೆಚ್ಚುವರಿ ಬಸ್‌ಗಳ ಸೇವೆ ಇರಲಿದೆ. ಮೆಜೆಸ್ಟಿಕ್‌, ಮೈಸೂರು ರಸ್ತೆ ಬಸ್‌ ನಿಲ್ದಾಣ, ಶಾಂತಿನಗರ, ವಿಜಯನಗರ, ಜೆ.ಪಿ. ನಗರ, ಜಯನಗರ 4ನೇ ಬ್ಲಾಕ್‌, ಜಾಲಹಳ್ಳಿ ಕ್ರಾಸ್‌, ನವರಂಗ್‌ (ರಾಜಾಜಿನಗರ), ಮಲ್ಲೇಶ್ವರ 18ನೇ ಅಡ್ಡರಸ್ತೆ, ಕೆಂಗೇರಿ ಉಪನಗರ ನಗರದ ಮತ್ತಿತರ ಸ್ಥಳಗಳಿಂದ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ. ನಗರದಿಂದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಹಾಗೂ ಹೈದರಾಬಾದ್‌, ಚೆನ್ನೈ, ಊಟಿ, ಕೊಡೈಕೆನಾಲ್‌, ಸೇಲಂ,ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ,ಮುಂಬೈ, ಎರ್ನಾಕುಲಂ, ಪಾಲ್ಗಾಟ್‌, ತಿರುವನಂತಪುರ ಸೇರಿದಂತೆ ಮತ್ತಿತರ ನೆರೆ ರಾಜ್ಯಗಳ ಸ್ಥಳಗಳಿಗೆ ವಿಶೇಷ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯ ಕಲ್ಪಿಸಲಾಗಿದೆ. ಇ-ಟಿಕೆಟ್‌ ಬುಕಿಂಗ್‌ಗೆ www.ksrtc.in ಸಂಪರ್ಕಿಸಬಹುದು. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಕಾಯ್ದಿರಿಸಿದರೆ ಶೇ.5ರಷ್ಟು ಮತ್ತು ಹೋಗುವ-ಬರುವ ಪ್ರಯಾಣದ ಟಿಕೇಟ್‌ನ್ನು ಒಟ್ಟಿಗೆ ಕಾಯ್ದಿರಿಸಿದರೆ, ಬರುವ ಪ್ರಯಾಣ ದರದಲ್ಲಿ ಶೇ.10ರಷ್ಟು ರಿಯಾಯ್ತಿ ನೀಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

Edited By

Shruthi G

Reported By

Madhu shree

Comments