1, 2 ಮತ್ತು 5 ರೂ. ನಾಣ್ಯ ಟಂಕಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ ಸರ್ಕಾರ

10 Jan 2018 5:59 PM | General
566 Report

ದೇಶದಲ್ಲಿನ ನಾಲ್ಕು ಸರಕಾರಿ ನೋಟು ಮುದ್ರಣ ಮತ್ತು ನಾಣ್ಯ ಟಂಕಿಸುವ ಘಟಕಗಳನ್ನು ನಿರ್ವಹಿಸುವ ಸೆಕ್ಯುರಿಟಿ ಪ್ರಿಂಟಿಂಗ್‌ ಆ್ಯಂಡ್‌ ಮಿಂಟಿಂಗ್‌ ಕಾರ್ಪೊರೇಶನ್‌ ಆಫ್ ಇಂಡಿಯಾ ಲಿಮಿಟೆಡ್‌ (ಎಸ್‌ಪಿಎಂಸಿಐಎಲ್‌) ಸಂಸ್ಥೆಯು ನಿನ್ನೆ ಮಂಗಳವಾರ 1, 2 ಮತ್ತು 5 ರೂ. ನಾಣ್ಯ ಟಂಕಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸುವ ನಿರ್ಧಾರ ಕೈಗೊಂಡಿತು.

ದೇಶದ ಟಂಕಸಾಲೆಗಳಲ್ಲಿ 252.80 ಕೋಟಿ ನಾಣ್ಯಗಳು ಹೆಚ್ಚುವರಿಯಾಗಿ ಟಂಕಿಸಲ್ಪಟ್ಟು ಅವುಗಳನ್ನು ಆರ್‌ಬಿಐ ಇನ್ನೂ ಎತ್ತಿಕೊಂಡಿಲ್ಲದ  ಕಾರಣ ತಾನು ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿತು. ಸರಕಾರ 1, 2 ಮತ್ತು 5 ರೂ.ಗಳ ನಾಣ್ಯ ಟಂಕಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ಕಾರಣ ಈ ನಾಣ್ಯಗಳು ಅತ್ಯಧಿಕ ಪ್ರಮಾಣದಲ್ಲಿ ಟಂಕಿಸಲ್ಪಟ್ಟು ಸದ್ಯಕ್ಕೆ ಟಂಕಸಾಲೆಯಲ್ಲಿ ಅಂತೆಯೇ ರಾಶಿ ಬಿದ್ದಿವೆ. ದೇಶದಲ್ಲಿ ಕಳೆದ ಆರರಿಂದ ಒಂಬತ್ತು ತಿಂಗಳ ಅವಧಿಯಲ್ಲಿ ಆನ್‌ಲೈನ್‌ ಪಾವತಿಗಳು ಗಮನಾರ್ಹ ಪ್ರಮಾಣದಲ್ಲಿ ಏರಿವೆ. ಸಣ್ಣ ಪುಟ್ಟ ಪಾವತಿಗಳನ್ನು ಕೂಡ ಜನರೀಗ ಡಿಜಿಟಲ್‌ ವ್ಯವಸ್ಥೆ ಮೂಲಕ ಮಾಡುತ್ತಿದ್ದಾರೆ. ನಗದು ರಹಿತ ವ್ಯವಹಾರಗಳಿಗೆ ಜನರು ಈಗ ಹೆಚ್ಚೆಚ್ಚು ಭೀಮ್‌, ಯುಪಿಐ ಮತ್ತು ಇತರ ವ್ಯಾಲೆಟ್‌ಗಳನ್ನು ಬಳಸುತ್ತಿದ್ದಾರೆ ಹಾಗಾಗಿ ನಗದು-ನಾಣ್ಯಗಳ ಅಗತ್ಯ ಈಗ ತಗ್ಗಿದೆ ಎಂದು ಅದು ಹೇಳಿದೆ. ಕಳೆದ ವರ್ಷ ಸರಕಾರ ನೋಟು ಅಮಾನ್ಯ ಮಾಡಿದ ಬಳಿಕ ಜನರು ಡಿಜಿಟಲ್‌ ಪಾವತಿಯನ್ನು ನೆಚ್ಚಿಕೊಂಡಿರುವುದು  ಕೂಡ ಈ ವಿದ್ಯಮಾನಕ್ಕೆ ಕಾರಣವಾಗಿದೆ ಎಂದು ಅದು ಹೇಳಿದೆ. ನಾಣ್ಯ ಟಂಕಿಸುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿರುವುದರಿಂದ ದೇಶದಲ್ಲಿ ಚಿಲ್ಲರೆ ಸಮಸ್ಯೆ ಉದ್ಭವವಾಗುವುದಿಲ್ಲ ಎಂದು ಅದು ಹೇಳಿದೆ. 

Edited By

Shruthi G

Reported By

Madhu shree

Comments