ಹಿರಿಯ ನಾಗರಿಕರ ಸಂವಾದದಲ್ಲಿ ಎಚ್ ಡಿಕೆ ಕೊಟ್ಟ ಭರವಸೆ ಏನು ಗೊತ್ತಾ ?

03 Jan 2018 5:44 PM | General
5415 Report

ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ರೈತರ ಮೇಲಿನ ಸಾಲ ಮನ್ನಾ, ಹಿರಿಯ ನಾಗರಿಕರಿಗೆ ಉಚಿತ ಪ್ರಯಾಣ ವ್ಯವಸ್ಥೆ ಹಾಗೂ ಉಚಿತ ಆರೋಗ್ಯ ಕಾರ್ಡ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ನಗರದ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶ್ರೀ ಮಹಲಕ್ಷ್ಮೀ ಎಜುಕೇಷನಲ್ ಟ್ರಸ್ಟ್ ಸಹಯೋಗದಲ್ಲಿ 28 ವಿಧಾನಸಭಾ ಕ್ಷೇತ್ರಗಳಲ್ಲಿ ಹಿರಿಯ ನಾಗರಿಕರೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಎಚ್ ಡಿಕೆ, ಹಿರಿಯ ನಾಗರಿಕರು ಗೌರವಯುತವಾಗಿ ಬದುಕು ನಡೆಸುವು ಅತ್ಯಗತ್ಯ. ಈ ನಿಟ್ಟಿನಲ್ಲಿ ಅವರಿಗೆ ಸಾಕಷ್ಟು ಅನುಕೂಲವಾಗುವ ಉಚಿತ ಪ್ರಯಾಣ ವ್ಯವಸ್ಥೆ ಹಾಗೂ ಆರೋಗ್ಯ ಕಾರ್ಡ್ ನೀಡಲಾಗುವುದು. ಹಿರಿಯ ನಾಗರಿಕರಿಗೆ 5 ಸಾವಿರ ರೂ.ವರೆಗೂ ಗೌರವ ಧನ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ 2 ರಿಂದ 3 ಸಾವಿರ ಕೋಟಿ ರೂ. ವೆಚ್ಚವಾಗಲಿದೆ. ನಾವು ಅಧಿಕಾರಕ್ಕೆ ಬಂದರೆ ಇಂತಹ ಜನಪರ ಯೋಜನೆಗಳೇ ನಮ್ಮ ಮೂಲ ಗುರಿಯಾಗಲಿದೆ ಎಂದು ನುಡಿದರು.

ಜನಪರವಾಗಿರುವ ನಮ್ಮ ಸರ್ಕಾರ ಸದಾ ಜನರ ಹಿತಕ್ಕಾಗಿ ಚಿಂತಿಸಲಿದೆ. ಈಗ ವಿಧಾನಸೌಧಕ್ಕೆ ಜನಪ್ರತಿನಿಧಿಗಳನ್ನು ಭೇಟಿ ಮಾಡಲು ಮುಕ್ತ ಅವಕಾಶವಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ವಿಧಾನಸೌಧದಲ್ಲೂ ಎಲ್ಲಾ ಜನಪ್ರತಿನಿಧಿಗಳ ಭೇಟಿಗೆ ಮುಕ್ತ ಅವಕಾಶ ಕಲ್ಪಿಸಲಾಗುವುದು ಎಂದರು.ರೈತರು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಮಾಡಿರುವ ಸಾಲವನ್ನು ಮನ್ನಾ ಮಾಡಲಿದ್ದೇವೆ. ಇದಕ್ಕೆ ಹೆಚ್ಚೆಂದರೆ 50 ಸಾವಿರ ಕೋಟಿ ವ್ಯಯವಾಗಲಿದೆ. ಆದರೆ ರಾಜ್ಯ ಸರ್ಕಾರ ಇದುವರೆಗೂ ಇಂತಹ ಚಿಂತನೆ ಮಾಡಿಲ್ಲ. ಕಳೆದ 4 ವರ್ಷದಲ್ಲಿ 1.25 ಲಕ್ಷ ಕೋಟಿ ಸಾಲ ಮಾಡಿದೆ. ಕಾರ್ಪೊರೇಟ್ ಕಂಪೆನಿಗಳ ಎನ್‍ಪಿಎ ತೀರಿಸುತ್ತಿದೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರ ಹೊಸ ಕಾಯಿದೆ ಜಾರಿಗೆ ತರುತ್ತಿದ್ದು , ಅದರಡಿ 25 ಲಕ್ಷ ನಿಶ್ಚಿತ ಠೇವಣಿ ಇಟ್ಟಿರುವವರ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು ಮುಂದಾಗಿದೆ. ಆದರೆ ಹಿರಿಯ ನಾಗರಿಕರು ಇಂತಹ ಕಾಯಿದೆಗಳಿಂದ ತೊಂದರೆಗೆ ಸಿಲುಕುತ್ತಾರೆ. ಕಾರಣ ಅವರು ಜೀವಮಾನದಲ್ಲಿ ಗಳಿಸಿದ ಹಣವನ್ನು ಎಫ್‍ಡಿ ಮಾಡಿ ಅದರಿಂದ ಬರುವ ಹಣದಲ್ಲಿ ಬದುಕು ಸಾಗಿಸುತ್ತಿರುತ್ತಾರೆ. ಈ ರೀತಿಯಾದರೆ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು. ಸರ್ಕಾರಿ ಶಾಲೆ, ಆಸ್ಪತ್ರೆಗಳಿಗೆ ಸಾಮಾನ್ಯರು ಬರುವಂತಹ ಬದಲಾವಣೆ ತರಬೇಕಾಗಿದೆ. ಇಂತಹ ಎಲ್ಲಾ ಬದಲಾವಣೆಗಳಿಗೆ ಸಮಿಶ್ರ ಸರ್ಕಾರ ಬಂದರೆ ಉಪಯೋಗವಿಲ್ಲ. ಪೂರ್ಣ ಪ್ರಮಾಣದಲ್ಲಿ ನಮ್ಮನ್ನು ಅಧಿಕಾರಕ್ಕೆ ತನ್ನಿ. ನಾವು ಯಾವುದೇ ಪಕ್ಷಗಳ ಹಂಗಿನಲ್ಲಿ ಅಧಿಕಾರ ನಡೆಸಲು ಇಚ್ಚಿಸುವುದಿಲ್ಲ. ಜನರ ಹಂಗಿನಲ್ಲಿ ಆಡಳಿತ ನಡೆಸಲು ಬಯಸುತ್ತೇವೆ ಎಂದು ಹೇಳಿದರು.

ಇದುವರೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಬಣ್ಣ ಬಣ್ಣದ ಜಾಹಿರಾತುಗಳಿಗಾಗಿ ಸಾಕಷ್ಟು ಹಣ ಖರ್ಚು ಮಾಡಿವೆ. ಇದನ್ನೇ ದೊಡ್ಡ ಯೋಜನೆಗೆ ಬಳಸಿದ್ದರೆ ಜನರಿಗೆ ನೆಮ್ಮದಿಯ ಜೀವನ ಸಿಗುತ್ತಿತ್ತು ಎಂದು ಲೇವಡಿ ಮಾಡಿದರು. ಕೇಂದ್ರ ಇದಕ್ಕಾಗಿ 3 ರಿಂದ 4 ಸಾವಿರ ಕೋಟಿ, ರಾಜ್ಯ ಒಂದು ಸಾವಿರ ಕೋಟಿ ಖರ್ಚು ಮಾಡಿದೆ. ರಾಜ್ಯ ಸರ್ಕಾರ ಈ ಹಣವನ್ನು ಬೆಂಗಳೂರಿನ ನಾಗರಿಕರಿಗಾಗಿ ಖರ್ಚು ಮಾಡಿದರೆ, ಮತ್ತಷ್ಟು ಉತ್ತಮ ಜೀವನ ಸಾಗಿಸಲು ಅವರಿಗೆ ಅನುವು ಮಾಡಿಕೊಟ್ಟಂತಾಗುತ್ತಿತ್ತು ಎಂದು ಹೇಳಿದರು.ಭ್ರಷ್ಟಾಚಾರದ ಬಗ್ಗೆ ಮಾತನಾಡುವಂತೆಯೇ ಇಲ್ಲ. ಮುಖ್ಯಮಂತ್ರಿಯಾದವರು ಆಸೆ-ಆಕಾಂಕ್ಷೆ ಇಲ್ಲದೆ ಸರ್ವರ ಅಭಿವೃದ್ಧಿಗೆ ಶ್ರಮಿಸಬೇಕು.

ಸಮೀಕ್ಷೆಯಲ್ಲಿ ಜೆಡಿಎಸ್‍ಗೆ ಶೇ.45ರಷ್ಟು ಮಂದಿ ಬೆಂಬಲವಾಗಿದ್ದಾರೆ. ಅದನ್ನು ಇನ್ನು ಮುಂದುವರೆಸಿದರೆ, ನಮಗೆ ಶಕ್ತಿ ತುಂಬಿದರೆ ಇಂತಹ ಹಲವಾರು ಯೋಜನೆಗಳನ್ನು ನಿಮ್ಮ ನೆರವಿಗೆ ಬರಲಿದೆ ಎಂದು ಹೇಳಿದರು. ನಾವು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಕಚೇರಿಯಲ್ಲಿ ವಿಕಲಚೇತನರಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವು. ಐಎಎಸ್ ಅಧಿಕಾರಿಗಳಿಗೆ ನಮಗೆ ಬಡವರ ಕಷ್ಟ ತೀರುವುದಿಲ್ಲ. ಜನಸಾಮಾನ್ಯರ ಬಳಿ ಹೋದಾಗ ಸಮಸ್ಯೆಯ ಅರಿವಾಗುತ್ತದೆ ಎಂದರು. ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವ ಜನರಿಗೆ ಮಾಸಿಕ 5 ಸಾವಿರ ರೂ. ನೀಡುವ ಯೋಜನೆ ಇದ್ದು, ಇದನ್ನು 20 ವರ್ಷದವರೆಗೆ ಮುಂದುವರೆಸಲಾಗುವುದು. ಆ ಭಾಗದ ಯುವ ಜನರು ಗಿಡ-ಮರ ಬೆಳೆಸಿ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು. ರೈತರಿಗೆ ಹಾಗೂ ಕೈಗಾರಿಕೆಗಳಿಗೆ 24*7 ನಿರಂತರ ವಿದ್ಯುತ್ ನೀಡಲಾಗುವುದು. ಈ ನಿರಂತರ ವಿದ್ಯುತ್ ಯೋಜನೆ 2014ರಲ್ಲೇ ಆಗಬೇಕಿತ್ತು. ಆದರೆ ನಮ್ಮ ಸರ್ಕಾರಗಳು ವಿದ್ಯುತ್ ಉತ್ಪಾದನೆಗಿಂತ ಖರೀದಿಯಲ್ಲಾ ಹೆಚ್ಚು ಆಸಕ್ತಿ ತೋರಿದವು ಎಂದು ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

Edited By

Shruthi G

Reported By

Shruthi G

Comments