ಮಹದಾಯಿ ಸಮಸ್ಯೆಗೆ ಪ್ರಧಾನಿ ಮಧ್ಯಸ್ಥಿಕೆಗೆ ಆಗ್ರಹಿಸಿ, ಹೆದ್ದಾರಿಯಲ್ಲಿ ಪ್ರತಿಭಟನೆ

03 Jan 2018 1:50 PM | General
394 Report

ಮಹದಾಯಿ ನದಿ ನೀರು ಹಂಚಿಕೆ ಸಮಸ್ಯೆ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿಯವರು ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿ ಇಂದು ಕನ್ನಡ ಒಕ್ಕೂಟದ ವತಿಯಿಂದ ನಗರದ ನೆಲಮಂಗಲ ಟೋಲ್ ಬಳಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಗೋವಾ-ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ನಡುವೆ ಉದ್ಭವಿಸಿರುವ ಮಹದಾಯಿ ನದಿ ನೀರು ಹಂಚಿಕೆ ವಿವಾದದಿಂದ ಉತ್ತರ ಕರ್ನಾಟಕದ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯದಂತಾಗಿದೆ.

ಇದನ್ನು ಕೂಡಲೇ ಪ್ರಧಾನಿ ನೇತೃತ್ವದಲ್ಲಿ ಪರಿಹರಿಸಿ ನೀರು ಹಂಚಿಕೆಗೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿ ವಿವಿಧ ಕನ್ನಡಪರ ಸಂಘಟನೆಗಳು ಇಂದು ಬಂದ್ ನಡೆಸಿದವು.ರಸ್ತೆಯಲ್ಲಿ ಜಮಾಯಿಸಿದ ನೂರಾರು ಮಂದಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಆಕ್ರೋಶ ವ್ಯಕ್ತಪಡಿಸಿ ಕುಡಿಯುವ ನೀರು ಎಲ್ಲರ ಮೂಲಭೂತ ಹಕ್ಕಾಗಿದ್ದು, ಇಂತಹ ಸಮಸ್ಯೆ ಉಭಯ ರಾಜ್ಯಗಳ ನಡುವೆ ಭುಗಿಲೆದ್ದಾಗ ಸಂಧಾನ ಮಾತುಕತೆ ಮೂಲಕ ಬಗೆಹರಿಸಬೇಕು. ಆದರೆ ಪ್ರಧಾನಮಂತ್ರಿಗಳು ಇದುವರೆಗೂ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಮುಂದಾಗಿಲ್ಲ ಎಂದು ಕಿಡಿಕಾರಿದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನಸೆಳೆಯಲು ಇಂದು ಬೆಳಗಾವಿಯಿಂದ ಬೆಂಗಳೂರುವರೆಗೆ ನಗರಗಳ ಹೆದ್ದಾರಿ ಬಂದ್ ನಡೆಸಲಾಯಿತು. 

ವಿವಿಧ ಹೆದ್ದಾರಿಗಳ ಬಂದ್: ಇದೇ ವೇಳೆ ಬೆಳಗಾವಿಯಿಂದ ಬೆಂಗಳೂರಿನವರೆಗಿನ ಹುಬ್ಬಳ್ಳಿ, ಧಾರವಾಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು ಸೇರಿದಂತೆ ಇತರೆ ನಗರಗಳಲ್ಲೂ ನಗರ ಹೆದ್ದಾರಿಗಳನ್ನು ಬಂದ್ ಮಾಡಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಕನ್ನಡ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟಿಸಿ ಮಹದಾಯಿ ನದಿ ನೀರು ಹಂಚಿಕೆ ವಿವಾದ ಶೀಘ್ರ ಬಗೆಹರಿಸುವಂತೆ ಆಗ್ರಹಿಸಿದರು. ಈ ಸಂಬಂಧ ಪ್ರಧಾನ ಮಂತ್ರಿಗಳು ಕಾಳಜಿ ವಹಿಸಿ ಮೂರೂ ರಾಜ್ಯಗಳ ಹಿತ ಕಾಪಾಡಬೇಕು. ಅದಕ್ಕಾಗಿ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವುದು ಸೇರಿದಂತೆ ಇನ್ನಿತರ ಮಾರ್ಗಗಳ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.

Edited By

Shruthi G

Reported By

Madhu shree

Comments