ಸಂಕ್ರಾಂತಿಗೆ 24 ಸಂಚಾರಿ ಇಂದಿರಾ ಕ್ಯಾಂಟೀನ್ ಆರಂಭ

01 Jan 2018 11:02 AM | General
338 Report

ಇಂದಿರಾ ಕ್ಯಾಂಟೀನ್ ಆರಂಭಿಸಲು ಜಾಗದ ಕೊರತೆ ಇರುವ ಬಿಬಿಎಂಪಿಯ 24 ವಾರ್ಡುಗಳಲ್ಲಿ ಸಂಕ್ರಾಂತಿ ಹಬ್ಬದ ವೇಳೆಗೆ 'ಸಂಚಾರಿ ಇಂದಿರಾ ಕ್ಯಾಂಟೀನ್'ಗಳ ಮೂಲಕ ಕಡಿಮೆ ದರದಲ್ಲಿ ಊಟ, ತಿಂಡಿ ವಿತರಣೆ ಆರಂಭವಾಗಲಿವೆ. ಬಿಬಿಎಂಪಿಯ 198 ವಾರ್ಡುಗಳ ಪೈಕಿ 174 ವಾರ್ಡುಗಳಲ್ಲಿ ಇಂದಿರಾ ಕ್ಯಾಂಟೀನ್ಗೆ ಸೂಕ್ತ ಸ್ಥಳಾವಕಾಶ ದೊರೆತಿದ್ದು, ಇವುಗಳಲ್ಲಿ 160ಕ್ಕೂ ಹೆಚ್ಚು ಕ್ಯಾಂಟೀನ್ ಆರಂಭವಾಗಿದೆ. ತಡವಾಗಿ ಜಾಗ ದೊರೆತ ಕೆಲ ಕ್ಯಾಂಟೀನ್ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಉಳಿದ 24 ವಾರ್ಡುಗಳಲ್ಲಿ ಜಾಗದ ಕೊರತೆಯಿಂದಾಗಿ ಸಂಚಾರಿ ಇಂದಿರಾ ಕ್ಯಾಂಟೀನ್ಗಳನ್ನು ಆರಂಭಿಸಲು ಬಿಬಿಎಂಪಿ ನಿರ್ಧರಿಸಿತ್ತು. ಅದರಂತೆ ಇದೀಗ ಸಂಚಾರಿ ಇಂದಿರಾ ಕ್ಯಾಂಟೀನ್ಗಳ ವಿನ್ಯಾಸ ಪೂರ್ಣಗೊಂಡಿದ್ದು, ಸಂಕ್ರಾಂತಿ ಹಬ್ಬದ ವೇಳೆಗೆ ಅಥವಾ ಜನವರಿ ಎರಡು ಅಥವಾ ಮೂರನೇ ವಾರದಲ್ಲಿ ಆರಂಭಿಸಲು ಬಿಬಿಎಂಪಿ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.

ಟೆಂಡರ್ ಮೂಲಕ 24 ವಾಹನಗಳನ್ನು ಪಡೆದು 'ಫುಡ್ ಆನ್ ವ್ಹೀಲ್ಸ್' ಪರಿಕಲ್ಪನೆಯಲ್ಲಿ ಸಂಚಾರಿ ಇಂದಿರಾ ಕ್ಯಾಂಟೀನ್ ಗಳನ್ನು ವಿನ್ಯಾಸ ಮಾಡಲಾಗಿದೆ. ವಾಹನದೊಳಗೆ ಬಿಲ್ ಕೌಂಟರ್, ಆಹಾರ ವಿತರಣಾ ಕೌಂಟರ್ ಗಳು, ಆಹಾರ ಬಿಸಿಯಾಗಿಡಲು ಹಾಟ್ ಕೇಸ್'ಗಳನ್ನು ಪ್ರತ್ಯೇಕವಾಗಿ ಅಳವಡಿಸಲಾಗುತ್ತದೆ. ಡ್ರೈವರ್ ಸೇರಿದಂತೆ ಐದು ಜನ ಸಿಬ್ಬಂದಿ ಪ್ರತಿ ಕ್ಯಾಂಟೀನ್ನಲ್ಲಿ ಇರುತ್ತಾರೆ. ಈ ಮೊಬೈಲ್ ಕ್ಯಾಂಟೀನ್ಗಳು ಎಲ್ಲಿವೆ, ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳಕ್ಕೆ ತಲುಪಿವೆಯೇ ಎಂದು ಅವುಗಳ ಕಾರ್ಯನಿರ್ವಹಣೆ ಮೇಲೆ ಕಣ್ಣಿಡಲು ಜಿಪಿಎಸ್ ಅಳವಡಿಕೆ ಮಾಡಲಾಗುತ್ತದೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.ಇಂದಿರಾ ಕ್ಯಾಂಟೀನ್ ನಲ್ಲಿ ಇರುವಂತಹ ಎಲ್ಲ ವ್ಯವಸ್ಥೆಗಳೂ ಮೊಬೈಲ್ ಕ್ಯಾಂಟೀನ್ ಒಳಗೆ ಅಳವಡಿಸಿ ವಿನ್ಯಾಸಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮೂರು ಬಾರಿ ಸಂಚಾರ ಮೊಬೈಲ್ ಕ್ಯಾಂಟೀನ್ ಗಳು ಬೆಳಗ್ಗೆ 7ರಿಂದ 9.30 ಮಧ್ಯಾಹ್ನ 12.30ರಿಂದ 2.30 ಹಾಗೂ ರಾತ್ರಿ 7.30ರಿಂದ 9.30ರವರೆಗೆ ನಿಗದಿತ ಸ್ಥಳದಲ್ಲಿ ಮಾತ್ರ ಆಹಾರ ವಿತರಿಸಲಿದೆ.

Edited By

Shruthi G

Reported By

Madhu shree

Comments