ಬಿ.ಎಸ್.ಯಡಿಯೂರಪ್ಪ ವಿಶ್ವಾಸ ದ್ರೋಹ ಮಾಡಿದ್ದಾರೆ : ವೀರೇಶ್ ಸೊಬರದಮಠ

28 Dec 2017 10:00 AM | General
245 Report

ಮಹಾದಾಯಿ ಯೋಜನೆ ಜಾರಿಗಾಗಿ ಕಳೆದ 5ದಿನದಿಂದ ನಡೆಯುತ್ತಿದ್ದ ಅಹೋರಾತ್ರಿ ಧರಣಿಯನ್ನು ವಾಪಸ್ ಪಡೆಯಲಾಗಿದೆ ಎಂದು ಮಹಾದಾಯಿ ಹೋರಾಟ ಸಮಿತಿಯ ಅಧ್ಯಕ್ಷ ವೀರೇಶ್ ಸೊಬರದಮಠ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15ದಿನದಲ್ಲಿ ನೀರನ್ನು ಹರಿಸುತ್ತೇವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೀಡಿದ ಮಾತನ್ನು ನಂಬಿ, ಅದಕ್ಕೆ ಒತ್ತಾಯಿಸಲು ರೈತರು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡೆವು.

ಆದರೆ, ಯಡಿಯೂರಪ್ಪ ನೀರನ್ನು ಹರಿಸುತ್ತೇನೆಂದು ಹೇಳಿಲ್ಲವೆಂದು ವಿಶ್ವಾಸ ದ್ರೋಹ ಮಾಡಿದ್ದಾರೆ. ಹೀಗಾಗಿ ಮತ್ತೊಮ್ಮೆ ನಮ್ಮ ಹೋರಾಟದ ಸ್ವರೂಪವನ್ನು ಬದಲಾಯಿಸಿಕೊಳ್ಳುವ ಉದ್ದೇಶದಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಹೋರಾಟವನ್ನು ಹಿಂಪಡೆದಿದ್ದೇವೆಂದು ಹೇಳಿದರು. ಕಳೆದ 5ದಿನದಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಹೋರಾಟಕ್ಕೆ ಇಲ್ಲಿನ ಜನತೆ ಬೆಂಬಲಿಸಿದ್ದಾರೆ. ತಿಂಡಿ, ಊಟ ಸೇರಿದಂತೆ ಎಲ್ಲ ರೀತಿಯ ಬೆಂಬಲವನ್ನು ನೀಡಿರುವುದಕ್ಕೆ ನಮ್ಮ ಹೃದಯ ತುಂಬಿ ಬಂದಿದೆ. ಜನತೆ ನಮ್ಮನ್ನು ಬೆಂಬಲಿಸಿರುವುದರಿಂದ ನಮ್ಮ ಈ ಹೋರಾಟಕ್ಕೆ ಪ್ರಾಥಮಿಕವಾದ ಜಯ ಸಿಕ್ಕಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಿನೆಮಾ ಕ್ಷೇತ್ರ, ವಕೀಲರು, ವೈದ್ಯರು ಹಾಗೂ ಕನ್ನಡ ಪರ ಸಂಘಟನೆಗಳು ನಾವು ಕೈಗೊಳ್ಳುವ ಎಲ್ಲ ರೀತಿಯ ಹೋರಾಟಕ್ಕೆ ಬೆಂಬಲಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬೆಂಬಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಮುಂದಿನ ಹೋರಾಟದ ರೂಪರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದರು.

ಮುಂದಿನ ಜನವರಿ ಅಂತ್ಯದೊಳಗೆ ಮಹಾದಾಯಿ ಯೋಜನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಭಿನ್ನವಾದ ಹೋರಾಟಗಳನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಜನವರಿಯ ಮೊದಲನೇ ವಾರದಲ್ಲಿ ನರಗುಂದದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡು ಕೇಂದ್ರ ಸರಕಾರದ ಗಮನ ಸೆಳೆಯಲಾಗುವುದು. ಈ ಸಮಾವೇಶಕ್ಕೆ ಸಿನೆಮಾ ನಟರು ಭಾಗವಹಿಸುತ್ತಿರುವುದೇ ನಮ್ಮ ಶಕ್ತಿಯೆಂದು ಅವರು ಹೋರಾಟದ ರೂಪರೇಷೆಗಳನ್ನು ಬಿಚ್ಚಿಟ್ಟರು.

Edited By

Shruthi G

Reported By

Madhu shree

Comments