ಪ್ರಚೋದನಾತ್ಮಕ ಟ್ವೀಟ್‌ ಹಿನ್ನಲೆ ಶೋಭಾ ಕರಂದ್ಲಾಜೆ ವಿರುದ್ಧ ದೂರು ದಾಖಲು

23 Dec 2017 11:02 AM | General
477 Report

ಹೊನ್ನಾವರದ ಮಾಗೋಡಿನ ಶಾಲಾ ಬಾಲಕಿ ಕಾವ್ಯಾ ಶೇಖರ್ ನಾಯ್ಕಳ ಮೇಲೆ ಚಾಕುವಿನಿಂದ ನಡೆದಿದ್ದ ಎನ್ನಲಾದ ಹಲ್ಲೆ ಪ್ರಕರಣದಲ್ಲಿ ಪ್ರಚೋದನಕಾರಿ ಟ್ವೀಟ್ ಮಾಡಿದ್ದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಂಸದೆ ಶೋಭಾ ಕರಂದ್ಲಾಜೆ (ಜಿಹಾದಿಗಳು ಹೊನ್ನಾವರದ ಹತ್ತಿರದ 9ನೇ ತರಗತಿಯಲ್ಲಿ ಓದುವ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕೊಲೆಗಯ್ಯಲು ಪ್ರಯತ್ನಿಸಿದ್ದಾರೆ. ಈ ಬಗ್ಗೆ ಸರ್ಕಾರ ಯಾಕೆ ಮೌನವನ್ನು ವಹಿಸಿದೆ? ಬಾಲಕಿ ಮಾನಭಂಗ ಮಾಡಿ ಗಾಯಗೊಳಿಸಿದವರನ್ನು ಬಂಧಿಸಿ. ಎಲ್ಲಿದ್ದೀರಿ ಸಿ.ಎಮ್. ಸಿದ್ಧರಾಮಯ್ಯ?) ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ನ್ನು ಗಂಭೀರವಾಗಿ ಪರಿಗಣಿಸಿದ ಹೊನ್ನಾವರ ಪೊಲೀಸರು ಸ್ವಯಂಪ್ರೇರಿತವಾಗಿ ಶೋಭಾ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

ಡಿಸೆಂಬರ್ 14ರಂದು ಮಾಗೋಡಿನ ಶಾಲಾ ಬಾಲಕಿ ಕಾವ್ಯಾ ನೀಡಿದ ದೂರಿನಲ್ಲಿ ಯಾವುದೇ ಧರ್ಮದ ಮೇಲೆ ಆರೋಪ ಮಾಡಿಲ್ಲ. ಆದರೆ, ಶೋಭಾ ಕರಂದ್ಲಾಜೆ ಅವರು ಹೊನ್ನಾವರ ಹಾಗೂ ಇತರೆ ಕಡೆಗಳಲ್ಲಿ ಸೌಹಾರ್ದತೆ ಕದಡುವ ಉದ್ದೇಶದಿಂದ ಟ್ವೀಟ್ ಮಾಡಿದ್ದಾರೆ. ಇದರಿಂದ ಹೊನ್ನಾವರದಲ್ಲಿ ಕೋಮು ಸೌಹಾರ್ದತೆ ಹದಗೆಟ್ಟಿದೆ ಎಂದು ಪೊಲೀಸರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಧರ್ಮ, ಧರ್ಮಗಳ ನಡುವೆ ದ್ವೇಷವನ್ನುಂಟು ಮಾಡುವ ಉದ್ದೇಶದಿಂದ ಹಾಗೂ ದೊಂಬಿ ಪ್ರಕರಣದಡಿಯಲ್ಲಿ ಸಂಸದೆ ಶೋಭಾ ಕರಂದಾಜ್ಲೆ ವಿರುದ್ಧ ಐಪಿಸಿ ಸೆಕ್ಷನ್ 153, 153(ಎ) ಮತ್ತು 505(2) ಅಡಿಯಲ್ಲಿ ಹೊನ್ನಾವರ ಪಿಎಸ್ ಐ ಆನಂದ ಮೂರ್ತಿ ಅವರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By

Shruthi G

Reported By

Madhu shree

Comments