ಬದುಕಿರುವಾಗಲೇ ಗಂಡನ ತಿಥಿ ಮಾಡಿದ ಹೆಂಡತಿ..!

18 Dec 2017 12:47 PM | General
267 Report

ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಪತಿಯ ಅಸಹಾಯಕತೆಯನ್ನು ಪತ್ನಿ ದುರುಪಯೋಗಪಡಿಸಿಕೊಂಡು ಆತ ಮೃತಪಟ್ಟಿದ್ದಾನೆಂದು ಊರಿಗೆಲ್ಲಾ ತಿಥಿ ಊಟ ಹಾಕಿಸಿ ನಂತರ ಕೋಟ್ಯಂತರ ರೂ. ಆಸ್ತಿಯನ್ನು ಮಾರಿ ಮಜಾ ಮಾಡಿರುವ ಪ್ರಕರಣ ತಡವಾಗಿ ಬಂದಿದೆ.

ಗುಬ್ಬಿ ತಾಲ್ಲೂಕಿನ ಸಿಎಸ್ ಪುರದ ಶ್ರೀಮಂತ ಮನೆತನದ ರಾಮಚಂದ್ರಯ್ಯ ಎಂಬುವರು 30 ವರ್ಷದ ಹಿಂದೆ ಜಯಮ್ಮ ಎಂಬುವರನ್ನು ವಿವಾಹವಾಗಿದ್ದರು. ಮೊದ ಮೊದಲು ದಂಪತಿ ಅನ್ಯೋನ್ಯವಾಗಿಯೇ ಇದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಕೆಲ ವರ್ಷಗಳ ನಂತರ ಜಯಮ್ಮ ವರ್ತನೆ ಬದಲಾಗಿ ತನ್ನ ಸಂಬಂಧಿಗಳಾದ ರಘುವಯ್ಯ , ಶ್ರೀನಿವಾಸಯ್ಯ, ತಿಮ್ಮೇಗೌಡ ಎಂಬುವರ ಜೊತೆ ಸೇರಿ ತನ್ನ ಗಂಡನಿಂದ ದೂರವಾಗುತ್ತಾ ಬಂದಳು. ಈ ಮಧ್ಯೆ ರಾಮಚಂದ್ರಯ್ಯ ಅವರ ಆರೋಗ್ಯದಲ್ಲಿ ಏರುಪೇರಾಗಿ ಹಾಸಿಗೆ ಹಿಡಿದರು. ಪತಿಯ ಆರೈಕೆ ಮಾಡಬೇಕಾದ ಪತ್ನಿ ಈ ಸಮಯವನ್ನೇ ದುರುಪಯೋಗಪಡಿಸಿಕೊಂಡು ಪತಿಯನ್ನು ಮನೆಯಿಂದ ಹೊರಗೆ ಹಾಕಿದ್ದಳು ಎನ್ನಲಾಗಿದೆ. ಈ ಸಂದರ್ಭದಲ್ಲಿ ಅಸಹಾಯಕರಾದ ರಾಮಚಂದ್ರಯ್ಯ ಕುಣಿಗಲ್‍ನ ಹುಲಿಯೂರು ದುರ್ಗದಲ್ಲಿನ ಅಕ್ಕನ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದರು. ಇತ್ತ ಜಯಮ್ಮ ಸಂಬಂಧಿಗಳ ಜೊತೆ ಸೇರಿ ಸಲುಗೆ ಬೆಳೆಸಿಕೊಂಡು ಗಂಡನ ಹೆಸರಿನಲ್ಲಿದ್ದ 5 ಕೋಟಿ ರೂ. ಹೆಚ್ಚು ಮೌಲ್ಯದ ಆಸ್ತಿ ಮೇಲೆ ಕಣ್ಣು ಹಾಕಿ ಈ ಆಸ್ತಿಯನ್ನು ತನ್ನದಾಗಿಸಿಕೊಳ್ಳಲು ಸಂಚು ರೂಪಿಸಿ, ಅದರಂತೆ ಮನೆ ಬಿಟ್ಟು ಹೋಗಿದ್ದ ಪತಿ ಮೃತಪಟ್ಟಿದ್ದಾನೆಂದು ಊರಿನವರಿಗೆಲ್ಲಾ ನಂಬಿಸಿ ತಿಥಿ ಊಟ ಹಾಕಿಸಿದ್ದಾಳೆ.

ಇದಕ್ಕೆ ಪೂರಕವೆಂಬಂತೆ ಹಣದ ಆಸೆಗಾಗಿ ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳು ಡೆತ್ ಸರ್ಟಿಫಿಕೇಟ್ ನೀಡಲು ದಾಖಲೆ ಸಿದ್ಧಪಡಿಸಿದ್ದಾರೆ. ಅಲ್ಲದೆ ಈ ಆಧಾರದ ಮೇಲೆ ಗುಬ್ಬಿಯ ತಹಸೀಲ್ದಾರ್ ಡೆತ್ ಸರ್ಟಿಫಿಕೇಟ್‍ಗೆ ಸಹಿ ಹಾಕಿದ್ದಾರೆ. 2016ರಲ್ಲಿ ರಾಮಚಂದ್ರಯ್ಯನಿಗೆ ಆಸ್ತಿ ಮಾರಾಟವಾಗಿರುವ ವಿಷಯ ಹೇಗೋ ಗೊತ್ತಾಗಿದೆ. ಆಗಿದ್ದಾಗಲಿ ಎಂದು ಊರಿಗೆ ರಾಮಚಂದ್ರಯ್ಯ ಬಂದಾಗ ಇಡೀ ಊರೇ ಭಯ ಬೀಳುತ್ತದೆ. ಇದೇನಪ್ಪಾ ಸತ್ತ ವ್ಯಕ್ತಿ ಹೇಗೆ ಬದುಕಿ ಬಂದ ಎಂದು ಆಶ್ಚರ್ಯದಿಂದ ನೋಡಿದ್ದಾರೆ. ರಾಮಚಂದ್ರಯ್ಯ ತಾನು ಹಾಸಿಗೆ ಹಿಡಿದು ಅಕ್ಕನ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದುದನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಈತನ ಮಾತನ್ನು ಕೇಳಿದ ಗ್ರಾಮಸ್ಥರು ಜಯಮ್ಮನಿಗೆ ಛೀಮಾರಿ ಹಾಕಿದ್ದಾರೆ. ಇದೇ ಕೋಪಕ್ಕೆ ಜಯಮ್ಮ ಜೊತೆಗಿದ್ದ ನಾಲ್ವರು ರಾಮಚಂದ್ರನ ಮೇಲೆ ಹಲ್ಲೆ ನಡೆಸಿದ್ದಾರೆ. ಇದಕ್ಕೆ ಬಗ್ಗದ ರಾಮಚಂದ್ರ ತಾನು ಬದುಕಿದ್ದೇನೆ ಎಂದು ಸಾಬೀತು ಮಾಡಲು ಮತ್ತು ಇವರಿಗೆಲ್ಲಾ ಶಿಕ್ಷೆ ಕೊಡಿಸಬೇಕೆಂದು ಹೋರಾಡುತ್ತಿದ್ದಾರೆ. ಸುಳ್ಳು ಡೆತ್ ಸರ್ಟಿಫಿಕೇಟ್ ನೀಡಿದ್ದ ತಹಸೀಲ್ದಾರ್ ಸೇರಿದಂತೆ ಶಾಮೀಲಾಗಿರುವ ಅಧಿಕಾರಿಗಳನ್ನು ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ರಾಮಚಂದ್ರಪ್ಪ ಅವರ ಪುತ್ರನ ಸಂಬಂಧಿಕ ರಘು ಹಾಗೂ ವಕೀಲ ರಂಗರಾಜ್ ಒತ್ತಾಯಿಸಿದ್ದಾರೆ. 

Edited By

Hema Latha

Reported By

Madhu shree

Comments