ಲೂಟಿ ಮಾಡುವ ರಾಜಕಾರಣಿಗಳತ್ತ 'ನಮ್ಮ ಟೈಗರ್ ಆ್ಯಪ್' ಕಣ್ಣಿಡಲಿದೆ

29 Nov 2017 5:18 PM | General
3717 Report

ಬೆಂಗಳೂರಿನ ಪುರಭವನ ಎದುರಲ್ಲಿ ನಮ್ಮ ಟೈಗರ್ ಟ್ಯಾಕ್ಸಿ ಸೇವೆಗೆ ದೇವೇಗೌಡರು ಗ್ರೀನ್ ಸಿಗ್ನಲ್ ನೀಡಿದರು. ಜೊತೆಗೆ ನಮ್ಮ ಟೈಗರ್ ಆ್ಯಪ್ ಮತ್ತು ಎಚ್ ಡಿಕೆ‌ ರಕ್ತದಾನ ಸಮಿತಿಯ ಲಾಂಛನವನ್ನು ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರು ಲೋಕಾರ್ಪಣೆ ಮಾಡಿದರು.ನಂತರ ಮಾತನಾಡಿದ ಅವರು, ಟ್ಯಾಕ್ಸಿಯ ಸಿಂಬಲ್ ಹುಲಿ ಮುಖ ಇದೆ. ಆದರೆ ಇದು ಯಾರನ್ನೂ ತಿನ್ನಲ್ಲ. ಲೂಟಿ ಮಾಡುವ ರಾಜಕಾರಣಿಗಳತ್ತ ಕಣ್ಣಿಡಲಿದೆ ಎಂದು ಚಟಾಕಿ ಹಾರಿಸಿದರು. ರಾಜ್ಯದಲ್ಲಿ ಯಾರು ಯಾರು ಏನೇನ್ ಮಾಡಿದಾರೆ ಎನ್ನುವುದನ್ನು ಹೊರಗೆ ತೆಗೆಯುವ ಕಾಲ ಈಗ ಬಂದಿದೆ ಎಂದು ಮಾರ್ಮಿಕವಾಗಿ ನುಡಿದರು.

ಟ್ಯಾಕ್ಸಿ ಕ್ಯಾಬ್ ಸೇವೆ ಶ್ರೇಷ್ಠ ಕಾರ್ಯಕ್ರಮ. ರಾಜ್ಯದ ಜನತೆಯ ಆಶೀರ್ವಾದದಿಂದ ಕುಮಾರಸ್ವಾಮಿ ಮತ್ತೆ ಸಿಎಂ ಆಗುತ್ತಾರೆ. ಇದು ನಾನು ಕೊಡುವ ಭಾಗ್ಯ ಅಲ್ಲ, ಜನರು ಕುಮಾರಸ್ವಾಮಿಗೆ ಕೊಡುವ ಭಾಗ್ಯ. ಇಡೀ ರಾಜ್ಯದಲ್ಲಿ ಕುಮಾರಣ್ಣ ಎಂಬ ಕೂಗು ಎದ್ದಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರು ಹೇಳಿದರು.

ಚಾಲಕರಿಗೆ ಸಾಕಷ್ಟು ಸೌಲಭ್ಯ ಕೊಡಲು ನಮ್ಮ ಟೈಗರ್ ನಿರ್ಧರಿಸಿದ್ದು, ಅವರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಯೋಗ್ಯ ನಿರ್ಣಯ ಮಾಡಿದ್ದಾರೆ. ಕುಮಾರಸ್ವಾಮಿ ದೇವೇಗೌಡರ ಮಗ ಎಂದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಪುತ್ರ ವಾತ್ಸಲ್ಯದಿಂದ ಲಾಂಛನ ಬಿಡುಗಡೆಗೆ ದೇವೇಗೌಡರು ಹೋಗಿದ್ದಾರೆ ಎಂದು ಟೀಕೆ ಬರಬಹುದು ಅದಕ್ಕೆ ನಾನು ಭಯಪಡುವುದಿಲ್ಲ ಎಂದರು.ಕುಮಾರಸ್ವಾಮಿ ಕೇವಲ 20 ತಿಂಗಳ‌ ಆಡಳಿತ ನಡೆಸಿ ಎಲ್ಲರ ಮನಸ್ಸು ಗೆದ್ದಿದ್ದಾರೆ. ನಮ್ಮ ಸರ್ಕಾರ ದುಡಿಯುವ ಕೈಗೆ ಆರ್ಥಿಕ ಶಕ್ತಿ ಕಲ್ಪಿಸುತ್ತದೆ. ಸಂಸಾರವನ್ನು ನಡೆಸುವ ನಿಟ್ಟಿನಲ್ಲಿ ಉದ್ಯೋಗ ಕಲ್ಪಿಸುತ್ತೇವೆ. ಕೂತು ತಿನ್ನುವವರನ್ನು ಹಿಂದೆ ಸರಿಸುತ್ತೇವೆ ಎಂದು ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಟೀಕಿಸಿದರು.

ಓಲಾ ಹಾಗೂ ಉಬರ್ ಕ್ಯಾಬ್ ಕಂಪನಿಯಿಂದ ಚಾಲಕರಿಗೆ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಲಹೆ ಮೇರೆ ಗೆ ನಮ್ಮ ಟೈಗರ್ ಕ್ಯಾಬ್ ಸೇವೆ ಆರಂಭಿಸಲಾಗಿದೆ. ನಾಳೆಯಿಂದ ಸಾರ್ವಜನಿಕರಿಗೆ ನಮ್ಮ ಟೈಗರ್ ಕ್ಯಾಬ್ ಸೇವೆ ಸಿಗಲಿದೆ.ಈಗಾಗಲೇ 5 ಸಾವಿರ ಕ್ಯಾಬ್‌ಗಳು ನಮ್ಮ ಟೈಗರ್ ಕ್ಯಾಬ್ ಆ್ಯಪ್‌ಗೆ ನೋಂದಣಿಯಾಗಿವೆ. ಓಲಾ, ಉಬರ್‌ಗೆ ಈ ಕ್ಯಾಬ್‌ಗಳು ಸ್ಪರ್ಧೆವೊಡ್ಡಲಿವೆ ಎಂದು ಹೇಳಲಾಗಿದೆ.

Edited By

Shruthi G

Reported By

Shruthi G

Comments