ಮೆಟ್ರೊದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿ ಶೀಘ್ರದಲ್ಲೇ ಜಾರಿ

28 Nov 2017 1:02 PM | General
278 Report

‘ನಮ್ಮ ಮೆಟ್ರೊ’ ದಲ್ಲಿ ಪ್ರತ್ಯೇಕ ಮಹಿಳಾ ಬೋಗಿ ಬೇಕೆಂಬ ಬೇಡಿಕೆಯು ಈಡೇರುವ ದಿನಗಳು ಸಮೀಪಿಸುತ್ತಿದ್ದು, ಡಿಸೆಂಬರ್‌ ಅಂತ್ಯದಲ್ಲಿ ಕೆಲ ಬೋಗಿಗಳು ಬಿಎಂಆರ್‌ಸಿಎಲ್‌ಗೆ ಹಸ್ತಾಂತರವಾಗಲಿದೆ.

ಬೋಗಿ ಖರೀದಿಗೆ ಟೆಂಡರ್‌ ಪ್ರಕ್ರಿಯೆ ನಡೆಯುವ ಮುನ್ನವೇ ಬಿಎಂಆರ್‌ಸಿಎಲ್‌ ಪ್ರತಿ ದಿನ ಪ್ರಯಾಣಿಸುವ ಮಹಿಳೆಯರ ಸಂಖ್ಯೆಯನ್ನು ಲೆಕ್ಕ ಹಾಕಲು ಸರ್ವೆ ಮಾಡಿದೆ. ಪ್ರತಿ ನಿಲ್ದಾಣದಿಂದ ಟೋಕನ್‌ ಪಡೆಯುವ ಮಹಿಳೆಯರ ಸಂಖ್ಯೆಯನ್ನು ಲೆಕ್ಕ ಮಾಡಲಾಗಿದೆ. ಅದರಂತೆ ಒಟ್ಟು ಪ್ರಯಾಣಿಕರಲ್ಲಿ ಶೇ.40 ರಷ್ಟು ಮಂದಿ ಮಹಿಳೆಯರು ಎಂದು ಅಂದಾಜಿಸಲಾಗಿದೆ. ಬೆಳಗ್ಗೆ 8.30 ಯಿಂದ 10.30 ಗಂಟೆವರೆಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಉದ್ಯೋಗಿಗಳಾಗಿದ್ದಾರೆ.ಇತ್ತೀಚೆಗೆ ವಿಕಲಚೇತನರು ಹಾಗೂ ವೃದ್ಧರಿಗಾಗಿ ಪ್ರತ್ಯೇಕ ಬೋಗಿ ಬೇಕೆಂಬ ಒತ್ತಾಯವೂ ಕೇಳಿಬಂದಿದೆ. ಮಹಿಳೆಯರಿಗೆ ಮೀಸಲಿಡುವ ಬೋಗಿಯಲ್ಲಿ ಈ ವರ್ಗದ ಮಂದಿಗೂ ಮೀಸಲು ನೀಡುವ ಸಾಧ್ಯತೆಯಿದೆ.

ಒಂದನೇ ಹಂತದ ಪೂರ್ಣ ಸಂಚಾರ ಆರಂಭವಾದ ನಂತರ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದರಿಂದ 1,421 ಕೋಟಿ ರೂ. ವೆಚ್ಚದಲ್ಲಿ 150 ಬೋಗಿಗಳನ್ನು ಬಿಇಎಂಎಲ್‌ನಿಂದ ಖರೀದಿಸಲಾಗುತ್ತಿದೆ. ಎಲ್ಲ ಬೋಗಿಗಳನ್ನು ಹಸ್ತಾಂತರ ಮಾಡುವ ಪ್ರಕ್ರಿಯೆ 2018 ರ ಕೊನೆಗೆ ಪೂರ್ಣಗೊಳ್ಳಲಿದೆ. ಆದರೆ ಕೆಲ ಬೋಗಿಗಳನ್ನು 2017 ರ ಡಿಸೆಂಬರ್‌ ಅಂತ್ಯದಲ್ಲೇ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕುರಿತು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಖಚಿತಪಡಿಸಿದ್ದು, ಡಿಸೆಂಬರ್‌ ಅಂತ್ಯದಲ್ಲೇ ಕೆಲ ಬೋಗಿಗಳನ್ನು ನೀಡುವುದಾಗಿ ಬಿಇಎಂಎಲ್‌ ತಿಳಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಬೋಗಿಗಳು ಬಂದ ಕೂಡಲೇ ರೈಲುಗಳಿಗೆ ಜೋಡಿಸಿ ಮೂರು ಬೋಗಿಯನ್ನು ಆರು ಬೋಗಿಗಳನ್ನಾಗಿ ಮಾಡಲಾಗುತ್ತದೆ. ಬಳಿಕ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿ ಮೀಸಲಿಡಲಾಗುತ್ತದೆ.

ಮೆಟ್ರೊದಲ್ಲಿ ಸದ್ಯಕ್ಕೆ 50 ರೈಲುಗಳು ಲಭ್ಯವಿದೆ. ಆದರೆ ಎಲ್ಲ ರೈಲುಗಳನ್ನು ಕಾರ್ಯಾಚರಣೆಗೆ ಇಳಿಸಿಲ್ಲ. ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ರೈಲುಗಳನ್ನು ಕಾರ್ಯಾಚರಣೆಗಿಳಿಸಲಾಗುತ್ತದೆ. ಮೈಸೂರು ರಸ್ತೆ-ಬೈಯಪ್ಪನಹಳ್ಳಿ ಮಾರ್ಗದಲ್ಲಿ (ನೇರಳೆ) 18 ಹಾಗೂ ನಾಗಸಂದ್ರ-ಯಲಚೇನಹಳ್ಳಿ ಮಾರ್ಗದಲ್ಲಿ (ಹಸಿರು) 11 ರೈಲುಗಳ ಕಾರ್ಯಾಚರಣೆ ನಡೆಯುತ್ತಿದೆ. 150 ಬೋಗಿಗಳು ಬಂದ ನಂತರ ನೇರಳೆ ಮಾರ್ಗದಲ್ಲಿ 21 ಹಾಗೂ ಹಸಿರು ಮಾರ್ಗದಲ್ಲಿ 29 ರೈಲುಗಳ ಸೇವೆ ನೀಡಲಾಗುತ್ತದೆ. ಒಂದು ವೇಳೆ ಅಗತ್ಯಕ್ಕಿಂತ ಹೆಚ್ಚು ರೈಲುಗಳು ಇದೆ ಎಂದೆನಿಸಿದರೆ ಕಾರ್ಯಾಚರಣೆಗಿಳಿಸುವ ರೈಲುಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗುತ್ತದೆ.

Edited By

Shruthi G

Reported By

Shruthi G

Comments