ಸಿದ್ದರಾಮಯ್ಯ ಬಹಿರಂಗ ಸಭೆಗೆ ಬರುವಂತೆ ಸವಾಲು ಹಾಕಿದ ಎಚ್ ಡಿಕೆ

20 Nov 2017 11:25 AM | General
3029 Report

ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು,ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ಬನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ಆಹ್ವಾನ ನೀಡುತ್ತಾರೆಯೇ ಹೊರತು ಜೆಡಿಎಸ್‌ಗೆ ನೀಡುವುದಿಲ್ಲ. ನಾನು 20 ತಿಂಗಳು ಮುಖ್ಯಮಂತ್ರಿ ಆಗಿದ್ದಾಗ ನೀಡಿರುವ ಕೊಡುಗೆಗಳು ಹಾಗೂ ಸಿದ್ದರಾಮಯ್ಯ ಇಲ್ಲಿವರೆಗೆ ನೀಡಿರುವ ಕೊಡುಗೆಗಳ ಕುರಿತು ಬಹಿರಂಗ ಚರ್ಚೆಗೆ ಆಹ್ವಾನ ನೀಡುತ್ತಿದ್ದೇನೆ. ಚರ್ಚೆಗೆ ಸಿದ್ದರಾಮಯ್ಯ ಸಿದ್ದರಿದ್ದಾರಾ?’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬಹಿರಂಗ ಸವಾಲು ಹಾಕಿದರು.

ಮುಷ್ಕರನಿರತ ವೈದ್ಯರನ್ನು ಭೇಟಿ ಮಾಡಲು ಹೋಗಿದ್ದಾಗ ಸಿದ್ದರಾಮಯ್ಯ ‘ಬೆಂಕಿ ಹೊತ್ತಿ ಉರಿದ ಮನೆಯಲ್ಲಿ ಗಳ ಇರಿಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಟೀಕಿಸಿದ್ದಾರೆ. ಆದರೆ, ಅವರು ಮಾಡುತ್ತಿರುವುದು ಚೆನ್ನಾಗಿರುವ ಮನೆಗೆ ಬೆಂಕಿ ಇಡುವ ಕೆಲಸ ಎಂದು ಕುಟುಕಿದರು.ನಾನು ಮುಖ್ಯಮಂತ್ರಿಯಾಗಿದ್ದಾಗಲೇ ನಕಲಿ ವೈದ್ಯರನ್ನು ನಿಯಂತ್ರಿಸುವ ಮಸೂದೆ ತಂದಿದ್ದೆ. ಆಗ ಆಸ್ಪತ್ರೆಯಲ್ಲಿ ಎಲ್ಲ ಚಿಕಿತ್ಸೆಯ ದರವನ್ನೂ ಪ್ರದರ್ಶಿಸಬೇಕು ಎಂಬ ಕಾನೂನು ಮಾಡಿದ್ದೆ. ಈಗ ಹೊಸದಾಗಿ ಜನಸಾಮಾನ್ಯರ ಪರ ಕಾನೂನು ತರುತ್ತಿರುವೆ ಎಂದು ರಮೇಶ್‌ಕುಮಾರ್ ‘ಡ್ರಾಮಾ’ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.ಆರೋಗ್ಯ ಸಚಿವ ಕೆ.ಆರ್.ರಮೇಶಕುಮಾರ್ ಆಷಾಡಭೂತಿ ರಾಜಕಾರಣಿ ‘ಡಬಲ್ ಗೇಮ್’ ರಾಜಕಾರಣವನ್ನು ಅವರು ಬಿಡಬೇಕು ಎಂದು ಕುಮಾರಸ್ವಾಮಿ ಚಾಟಿ ಬೀಸಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಬೇರೊಂದು ಪಕ್ಷದ ಸಹಾಯದಿಂದ ಸರ್ಕಾರ ರಚಿಸುವಂತಾದರೆ ಪ್ರತಿಜ್ಞಾ ವಿಧಿ ಸಮಾರಂಭಕ್ಕೆ ಹೋಗುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಘೋಷಿಸಿದರು.ಸ್ವಂತ ಬಲದ ಮೇಲೆ ಸರ್ಕಾರ ರಚಿಸುವಂತಹ ವಾತಾವರಣವನ್ನು ಮತದಾರರು ಕಲ್ಪಿಸಬೇಕು. ಆಗ ಮಾತ್ರ ಪಕ್ಷ ನೀಡುವ ವಾಗ್ದಾನವನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.ಅಡಗೂರು ಎಚ್.ವಿಶ್ವನಾಥ್ ಅವರು ಸೋನಿಯಾ ಗಾಂಧಿ ಅವರನ್ನು ಒಪ್ಪಿಸಿ ರಾತ್ರಿ 12 ಗಂಟೆಗೆ ಬಂದು ನಮ್ಮ ಪಕ್ಷದಲ್ಲಿ ಬೆಳೆದಿದ್ದ ಒಬ್ಬರನ್ನು ಕರೆದುಕೊಂಡು ಹೋದರು. ಆ ವ್ಯಕ್ತಿ ಮುಖ್ಯಮಂತ್ರಿಯೂ ಆದರು. ಈಗ ವಿಶ್ವನಾಥ್ ಅವರ ಸ್ಥಿತಿ ಏನಾಗಿದೆ ಎಂಬುದನ್ನು ಜನರು ಅರಿಯಬೇಕು ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

 

Edited By

Shruthi G

Reported By

Shruthi G

Comments