ದೇವೇಗೌಡರ ವರ್ಕ್‌ಶಾಪ್‌ ಭೇಟಿ ಗೊಂದಲಕ್ಕೀಡಾಗಿದ್ದೇಕೆ?

17 Nov 2017 12:15 PM | General
506 Report

ಇಲ್ಲಿನ ನೈರುತ್ಯ ರೈಲ್ವೆ ವಲಯದ ವರ್ಕ್‌ ಶಾಪ್‌ಗೆ ಭೇಟಿ ನೀಡಲು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರಿಗೆ ರೈಲ್ವೆ ಅಧಿಕಾರಿಗಳು ಅನುಮತಿ ನೀಡದ ಕಾರಣ ಕೆಲ ಕಾಲ ಗೊಂದಲ ಉಂಟಾಯಿತು.

ಹುಬ್ಬಳ್ಳಿಗೆ ಬಂದಿದ್ದ ಅವರು,ವರ್ಕ್‌ಶಾಪ್‌ಗೆ ಭೇಟಿ ನೀಡುವ ಸಲುವಾಗಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ (ಜಿಎಂ) ದೂರವಾಣಿ ಕರೆ ಮಾಡಿ, ಅನುಮತಿ ಕೋರಿದರು. ವರ್ಕ್‌ಶಾಪ್‌ ಸ್ಥಳ ನಿಷೇಧಿತ ಪ್ರದೇಶವಾಗಿದೆ.ಇಷ್ಟಕ್ಕೂ ಅಲ್ಲಿಗೆ ಯಾವ ಕಾರಣಕ್ಕೆ ಭೇಟಿ ನೀಡುತ್ತೀರಾ? ಭೇಟಿ ನೀಡಲೇಬೇಕಾದರೆ, ಪತ್ರ ಬರೆದು ಅನುಮತಿ ಪಡೆಯಬೇಕು ಎಂದು ಪ್ರಧಾನ ವ್ಯವಸ್ಥಾಪಕರು ಗೌಡರಿಗೆ ಸಲಹೆ ನೀಡಿದರು. ಆ ಪ್ರಕಾರ ಗೌಡರ ದೆಹಲಿ ಕಚೇರಿಯಿಂದ ಇ–ಮೇಲ್‌ನಲ್ಲಿ ಅನುಮತಿ ಕೋರಿ ಪತ್ರ ಕೂಡ ತರಿಸಿದರು. ಅದರ ನಂತರ ರೈಲ್ವೆ ಪ್ರಧಾನ ವ್ಯವಸ್ಥಾಪಕರ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ’ ಎಂದು ಶಾಸಕ ಎನ್‌.ಎಚ್‌.ಕೋನರಡ್ಡಿ ತಿಳಿಸಿದರು.ಇದರಿಂದ ಬಸವರಾಜ ಹೊರಟ್ಟಿ ಹಾಗೂ ನನಗೆ ಬೇಸರ ಆಯಿತು. ನಂತರ ಗೌಡರನ್ನು ಕರೆದುಕೊಂಡು ವರ್ಕ್‌ಶಾಪ್‌ಗೆ ಹೋದೆವು. ಅಲ್ಲಿಗೆ ಹೋದಾಗ ಅಧಿಕಾರಿಗಳು ಒಳಗೆ ಕರೆದೊಯ್ಯಲು ಮೀನಮೇಷ ಎಣಿಸಿದರು. ಇನ್ನು ಗಲಾಟೆ ಆಗುತ್ತದೆಂದು ತಿಳಿದ ಅಧಿಕಾರಿಗಳು ಓಡಿ ಬಂದು ಗೌಡರನ್ನು ಸ್ವಾಗತಿಸಿದರು’ ಎಂದು ಕೋನರೆಡ್ಡಿ ತಿಳಿಸಿದರು.

ಗೌಡರು ಪ್ರಧಾನಿಯಾಗಿದ್ದ ಕಾಲದಲ್ಲಿ ವರ್ಕ್‌ಶಾಪ್‌ ಆಧುನೀಕರಣಕ್ಕಾಗಿ 50 ಕೋಟಿ ಮಂಜೂರು ಮಾಡಿದ್ದರು. ಅದರ ಪರಿಣಾಮ ಏನೆಲ್ಲ ಆಗಿದೆ ಎಂಬುದನ್ನು ನೋಡಲು ಅವರು ಆಸಕ್ತಿ ಹೊಂದಿದ್ದರು. ಅಂದು ಅವರು ಹಾಕಿದ್ದ ಅಡಿಗಲ್ಲು ಎಲ್ಲಿದೆ ಎಂಬುದು ಕೂಡ ಅಲ್ಲಿನ ಅಧಿಕಾರಿಗಳಿಗೆ ಗೊತ್ತಿರಲಿಲ್ಲ. ಅಂತಿಮವಾಗಿ ಅಲ್ಲಿನ ಅಧಿಕಾರಿಗಳು ಅಡಿಗಲ್ಲು ತೋರಿಸಿದರು. ಅದನ್ನು ನೋಡಿ ಗೌಡರಿಗೆ ಖುಷಿ ಆಯಿತು’ ಎಂದು ಕೋನರೆಡ್ಡಿ ವಿವರಿಸಿದರು.

Edited By

Shruthi G

Reported By

Shruthi G

Comments