ವೈದ್ಯರ ಮುಷ್ಕರ ಬಗ್ಗೆ ಸರ್ಕಾರ ಕ್ಕೆ ಎಚ್ಡಿಕೆ ಹೇಳಿದ್ದೇನು?

17 Nov 2017 10:01 AM | General
1016 Report

ಸರ್ಕಾರ ಸರಿಯಾದ ವ್ಯವಸ್ಥೆ ಮಾಡಿಕೊಳ್ಳಲಾರದೇ ಖಾಸಗಿ ವೈದ್ಯರ ಮೇಲೆ ಗದಾಪ್ರಹಾರ ಮಾಡುತ್ತಿದೆ,' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬೆಳಗಾವಿಯಲ್ಲಿ ಪ್ರತಿಭಟನಾನಿರತ ವೈದ್ಯರನ್ನ ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಸಿಎಂ ನಿಮ್ಮನ್ನು ಕರೆಸಿ ಮಾತನಾಡಿದ್ದಾರೆ. ಆದರೆ ಓರ್ವ ಜವಾಬ್ದಾರಿಯುತ ಮಂತ್ರಿಗಳು ವೈದ್ಯರನ್ನು ಕರೆಯಿಸಿ ಮಾತನಾಡಬೇಕಿತ್ತು,ಎಂದು ಹೇಳಿದ್ದಾರೆ.ಸಚಿವ ರಮೇಶ ಕುಮಾರ್ ಬಡವರಿಗಾಗಿ ಈ ವಿಧೇಯಕ ತರಲು ಹೊರಟಿರುವುದಾಗಿ ಹೇಳಿದ್ದಾರೆ. ಈ ಭೂಮಿ ಮೇಲೆ ಅವರೊಬ್ಬರೇ ಬಡವರ ಪರ ಧ್ವನಿ ಎತ್ತುವವರು. ನಾವೆಲ್ಲ ಅಲ್ಲ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ,' ಎಂದು ಕುಮಾರಸ್ವಾಮಿ ಆರೋಗ್ಯ ಸಚಿವರ ಮೇಲೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸದನದಲ್ಲಿ ಬಿಜೆಪಿ ಸ್ನೇಹಿತರು ವೈದ್ಯರ ಮುಷ್ಕರದ ಕುರಿತು ಚರ್ಚೆ ಮಾಡಿದ್ದಾರೆ. ಮಾಜಿ ಸಿಎಂ ಜಗದೀಶ ಶೆಟ್ಟರ್ ಸರ್ಕಾರಕ್ಕೆ ಪ್ರತಿಷ್ಠೆ ಬಿಡಿ ಎಂದು ಹೇಳಿದ್ದಾರೆ. ಹೀಗಿದ್ದೂ ಸರ್ಕಾರ ಸರಿಯಾದ ವ್ಯವಸ್ಥೆ ಮಾಡಿಕೊಳ್ಳಲಾರದೇ ಖಾಸಗಿ ವೈದ್ಯರ ಮೇಲೆ ಗದಾಪ್ರಹಾರ ಮಾಡುತ್ತಿದೆ, ಎಂದು ಅವರು ಅಭಿಪ್ರಾಯಪಟ್ಟರು.ಖಾಸಗಿ ಆಸ್ಪತ್ರೆ ಬಂದ್ ಆದ ಹಿನ್ನೆಲೆಯಲ್ಲಿ ರೋಗಿ ಸಾವನ್ನಪ್ಪಿದ ಅಂತ ಹೇಳುತ್ತಿದ್ದೀರಿ. ಸಾವು ಹುಟ್ಟು ಸಾಮಾನ್ಯ. ಅದರಲ್ಲಿ ಅಂಕಿ ಸಂಖ್ಯೆಗಳನ್ನು ಕೊಟ್ಟು ನೆಗೆಟಿವ್ ಆಗಿ ಬಿಂಬಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳು ಮುಚ್ಚಿದಕ್ಕಾಗಿ ಸಾವನ್ನಪ್ಪಿದ್ದಾಗಿ ಬಿಂಬಿಸಲಾಗುತ್ತಿದೆ. ಇದು ಸರಿಯಲ್ಲ,' ಎಂದು ಕುಮಾರಸ್ವಾಮಿ ಹೇಳಿದರು.

ವೈದ್ಯರ ಪ್ರತಿಭಟನೆ ಇಲ್ಲದೆ ಆಸ್ಪತ್ರೆಗಳು ಆರಂಭವಿದ್ದಾಗಲೂ ಬಹಳ ಜನ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪುತ್ತಾರೆ. ಆಸ್ಪತ್ರೆಗಳು ತೆರೆದಿದ್ದಾಗಲೂ, ಈ ಮಸೂದೆ ಇಲ್ಲದಿದ್ದಾಗಲೂ ಅನಾರೋಗ್ಯದಿಂದ ಸಾವುಗಳಾಗಿವೆ. ವೈದ್ಯರ ಮುಷ್ಕರದಿಂದ ಸಾವುಗಳಾಗಿವೆ ಅಂತ ತೋರಿಸುತ್ತಿರುವ ಅಂಕಿ ಅಂಶಗಳು ವೈದ್ಯರ ಬಗ್ಗೆ ಜನರಲ್ಲಿ ನೆಗೆಟಿವ್ ಬಾವನೆ ಮೂಡಿಸುತ್ತಿವೆ,' ಎಂದು ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದರು.

ಸಚಿವ ರಮೇಶ ಕುಮಾರ್ ಅಂದರೆ ಎಲ್ಲರೂ ಯಾಕೆ ಭಯ ಬಿದ್ದಿದ್ದಾರೋ ಗೊತ್ತಿಲ್ಲ. ಈ ವಿಧೇಯಕ ಮಂಡನೆಯಾಗದ ಹಾಗೆ ನಾವು ನೋಡಿಕೊಳ್ಳುತ್ತೇವೆ. ಸರ್ಕಾರ ಪ್ರತಿಯೊಬ್ಬರಿಗೆ ಇನ್ಸುರೆನ್ಸ್ ಮಾಡಿಸಿ ಬಡವರನ್ನು ಉಳಿಕೊಳ್ಳಲಿ ಎನ್ನುವುದು ಸರಕಾರಕ್ಕೆ ನಮ್ಮ ಮನವಿ,' ಎಂದು ಅವರು ತಿಳಿಸಿದರು.ಬಿಜೆಪಿಯವರಿಗೂ ಈ ವಿಧೇಯಕ ಮಂಡನೆಯಾಗುವುದು ಬೇಕಿಲ್ಲ. ಅವರೂ ವೈದ್ಯರ ಪರವಾಗಿದ್ದಾರೆ ಎಂದು ಹೇಳಿದ ಕುಮಾರಸ್ವಾಮಿ, ವೈದ್ಯರ ಬಗ್ಗೆ ಸಾರ್ವಜನಿಕವಾಗಿ ಯಾರೂ ಕಾಮೆಂಟ್ ಮಾಡುವುದು ಬೇಕಾಗಿಲ್ಲ ಎಂದು ಹೇಳಿದರು.

ನೀವು ಒತ್ತಡದಲ್ಲಿ ಕೆಲಸ ಮಾಡುತ್ತೀರಿ. ನಿಮ್ಮ ಪರವಾಗಿ ಹೋರಾಟ ಮಾಡುವುದಕ್ಕೆ ನಾವು ಸಿದ್ದರಿದ್ದೇವೆ. ಯಾವುದನ್ನೂ ಅನುಷ್ಠಾನಕ್ಕೆ ತರುವುದಕ್ಕೆ ಬಿಡುವುದಿಲ್ಲ. ಈ ಸರ್ಕಾರಕ್ಕೆ ಮಾನವೀಯತೆ, ಮನುಷ್ಯತ್ವ, ಕಾಮನ್ ಸೆನ್ಸ್ ಇಲ್ಲ,' ಎಂದು ಕುಮಾರಸ್ವಾಮಿ ಟೀಕಸಿದರು.ತಾವೇ ಒಂದು ನಿರ್ಣಯ ಮಾಡಕೊಳ್ಳಿ. ನಾನು ನಿಮ್ಮ ಜವಾಬ್ದಾರಿ ಹೊರುತ್ತೇನೆ. ಇವತ್ತು ಸಚಿವರು ಸಭೆ ಮಾಡಿ ತೆಗೆದುಕೊಳ್ಳುವ ತೀರ್ಮಾನ ನೋಡಿಕೊಂಡು, ನಾಳೆ ನೀವು ಒಂದು ತೀರ್ಮಾನ ಮಾಡಿ,' ಎಂದು ಅವರು ವೈದ್ಯರಿಗೆ ಮನವಿ ಮಾಡಿಕೊಂಡರು.

Edited By

Shruthi G

Reported By

Shruthi G

Comments