ಕಡಲೆಕಾಯಿ ಪರಿಷೆಗೆ ಹರಿದುಬಂದ ಭಕ್ತ ಜನಸಾಗರ

14 Nov 2017 12:12 PM | General
528 Report

ಪ್ರತಿ ವರ್ಷದಂತೆ ಶ್ರೀಆಂಜನೇಯಸ್ವಾಮಿ ದೇವಾಲಯದಲ್ಲಿ 62ನೇ ವರ್ಷದ ಕಡಲೆಕಾಯಿ ಪರಿಷೆ ವಿಜೃಂಭಣೆಯಿಂದ ನಡೆಯಿತು. ಶ್ರೀಆಂಜನೇಯಸ್ವಾಮಿಗೆ ಕಡಲೆಕಾಯಿ ಮತ್ತು ಉದ್ದಿನ ವಡೆ ಹಾರವನ್ನು ಹಾಕಿ ಅಲಂಕಾರ ಮಾಡಲಾಯಿತು. ಸಹಸ್ರ ನಾಮ ಅರ್ಚನೆ ನಡೆಯಿತು.

 ಶ್ರೀಗವಿ ಬೀರಲಿಂಗೇಶ್ವರಸ್ವಾಮಿ ಮತ್ತು ಭಕ್ತ ಕನಕದಾಸ ಸ್ವಾಮಿಯವರಿಗೆ ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು. ಕಡಲೆಕಾಯಿ ಪರಿಷೆ ಅಂಗವಾಗಿ ಕಾರ್ತಿಕಮಾಸ ದೀಪದರ್ಶನವನ್ನು ನಡೆಸಿದರು. ಕಡಲೆಕಾಯಿ ವ್ಯಾಪಾರಸ್ಥರು ರಾಶಿ ರಾಶಿ ಕಡಲೆಯನ್ನು ಹಾಕಿ ಮಾರಿದರು. ಒಂದು ಕೆಜಿ ಕಡಲೆಕಾಯಿಗೆ 60 ರಿಂದ 80 ರೂ. ವರೆಗೆ ಇತ್ತು. ಪಟ್ಟಣದ ಸಾವಿರಾರು ಜನರು ಶ್ರೀಆಂಜನೇಯಸ್ವಾಮಿ ದರ್ಶನ ಪಡೆದರು.  ಪ್ರತಿ ವರ್ಷದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಬಾರಿ ಸಮರ್ಪಕ ಮಳೆಯಾದ ಕಾರಣ ಕಡಲೆಕಾಯಿ ಬೆಳೆ ಇಳುವರಿ ಹೆಚ್ಚಾಗಿ ಬಂದಿತ್ತು. ಗಟ್ಟಿ ಕಡಲೆ ಕಾಯಿ ಹುಡುಕುವ ಪರಿಸ್ಥಿತಿ ಉಂಟಾಗಿತ್ತು. ಕಡಲೆ ಕಾಯಿ ನಾಗರಿಕರನ್ನು ಆಕರ್ಷಿಸಿತ್ತು. ವ್ಯಾಪಾರಸ್ಥರ ಮೊಗದಲ್ಲಿ ಮಂದಹಾಸ ಮೂಡಿತ್ತು.

ಇದೇ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಬಡ್ಡಿ ಪಂದ್ಯಾವಳಿ ಹಾಗೂ 100 ಮೀ. ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಉತ್ತಮ ರಾಸುಗಳಿಗೆ ಬಹುಮಾನ ನೀಡಲಾಯಿತು. ಕಡಲೆಕಾಯಿ ಪರಿಷೆ ಅಂಗವಾಗಿ ಬರುವ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಪೂಜಾ ಕಾರ್ಯಕ್ರಮದಲ್ಲಿ 'ಜೈ ಮಾರುತಿ ಭಕ್ತ ಮಂಡಳಿ' ಅಧ್ಯಕ್ಷ ಕೆ.ಮೋಟಪ್ಪ, ಉಪಾಧ್ಯಕ್ಷ ಎನ್‌.ಮರಿಯಪ್ಪಾಚಾರ್‌, ಪ್ರಧಾನ ಕಾರ್ಯದರ್ಶಿ ಡಿ.ಎಂ.ಮುನಿರಾಜಪ್ಪ, ಖಜಾಂಚಿ ಎನ್‌.ಮುನಿರಾಜ್‌, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಗೌರವಾಧ್ಯಕ್ಷ ಎನ್‌.ಚಂದ್ರಶೇಖರ್‌ ಹಾಗೂ ಭಕ್ತಮಂಡಳಿಯ ಪದಾಧಿಕಾರಿಗಳು ಹಾಜರಿದ್ದರು.

Edited By

Hema Latha

Reported By

Madhu shree

Comments