ಇತಿಹಾಸ ಪ್ರಸಿದ್ಧ ಕಡಲೆಕಾಯಿ ಪರಿಷೆಗೆ ಬಸವನಗುಡಿ ಸಿದ್ದ

09 Nov 2017 1:38 PM | General
609 Report

ಇತಿಹಾಸ ಪ್ರಸಿದ್ಧ ಕಡಲೆಕಾಯಿ ಪರಿಷೆಗೆ ಬಸವನಗುಡಿಯ ದೊಡ್ಡಗಣಪತಿ ದೇವಾಲಯ ಸಜ್ಜಾಗಿದೆ. ಇದೇ 13 ರಂದು (ಸೋಮವಾರ) ಅಧಿಕೃತವಾಗಿ ಪರಿಷೆ ಉದ್ಘಾಟನೆಯಾಗಲಿದೆ. ಆದರೆ ಈಗಾಗಲೇ ಕಡಲೆಕಾಯಿ ಮಾರಾಟ ಮಳಿಗೆಗಳು ಇಲ್ಲಿ ತಲೆ ಎತ್ತಿವೆ.

ಸೋಮವಾರ ಬೆಳಿಗ್ಗೆ 10 ಗಂಟೆಗೆ ಪರಿಷೆ ಉದ್ಘಾಟನೆಗೊಳ್ಳಲಿದೆ. ನಂದಿಗೆ ಕಡಲೆಕಾಯಿ ಅಭಿಷೇಕ ಮಾಡಿದ ನಂತರ ಗಣಪತಿ ಮೂರ್ತಿಗೂ ಕಡಲೆಕಾಯಿ ಅಭಿಷೇಕ ಮಾಡಲಾಗುವುದು. ತರುವಾಯ ಗಣಪತಿ ಮೂರ್ತಿಯನ್ನು ಬೆಣ್ಣೆ ಹಾಗೂ ಕಡಲೆಕಾಯಿಯಿಂದ ವಿಶೇಷವಾಗಿ ಅಲಂಕರಿಸಿ ಪೂಜೆ ಸಲ್ಲಿಸಲಾಗುತ್ತದೆ. ಭಕ್ತರಿಗೆ ಕಡಲೆಕಾಯಿಯನ್ನೇ ಪ್ರಸಾದವಾಗಿ ನೀಡಲಾಗುತ್ತದೆ ಎಂದು ದೊಡ್ಡಗಣಪತಿ ದೇವಸ್ಥಾನದ ಅರ್ಚಕ ಗುರುನಾಥ ತಿಳಿಸಿದರು.ಮೂರು ದಿನಗಳು ನಡೆಯುವ ಪರಿಷೆಯಲ್ಲಿ ಪ್ರತಿ ವರ್ಷ ಸಾಮಾನ್ಯವಾಗಿ 5 ರಿಂದ 6 ಲಕ್ಷ ಜನರು ಭಾಗವಹಿಸುತ್ತಿದ್ದರು. ಈ ವರ್ಷ ಇದೇ ಮೊದಲ ಬಾರಿಗೆ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿಯೂ ಕಡಲೆಕಾಯಿ ಜಾತ್ರೆ ನಡೆದಿರುವುದರಿಂದ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಬಗ್ಗೆ ಕುತೂಹಲವಿದೆ’ ಎಂದರು.

ದೇವಾಲಯದ ಎದುರಿನಲ್ಲಿ ಬೆಂಗಳೂರು, ಕೋಲಾರ, ಮಾಲೂರು, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಮಾಗಡಿ, ಹೊಸ ಕೋಟೆ ತಮಿಳುನಾಡು ಹಾಗೂ ಆಂಧ್ರಪ್ರದೇಶದ ರೈತರು ಮತ್ತು ವ್ಯಾಪಾರಿಗಳು ಡೇರೆ ಹಾಕಿದ್ದಾರೆ. ರಸ್ತೆಯ ಎರಡೂ ಇಕ್ಕೆಲಗಳಲ್ಲಿನ ರಾಶಿ ರಾಶಿ ಕಡಲೆಕಾಯಿ ಗ್ರಾಹಕರನ್ನು ಸೆಳೆಯುತ್ತಿವೆ.ಒಂದು ಲೀಟರ್‌ ಕಡಲೆಕಾಯಿ ₹25 ರಿಂದ ₹ 40 ರವರೆಗೆ ಮಾರಾಟವಾಗುತ್ತಿವೆ. ಬಣ್ಣ, ಗಾತ್ರ ಆಧರಿಸಿ ಹಸಿ ಕಾಯಿ, ಹುರಿದ ಕಾಯಿಗಳಿಗೆ ಪ್ರತ್ಯೇಕ ಬೆಲೆ ನಿಗದಿಪಡಿಸಲಾಗಿದೆ. ಒಂದು ಬೀಜದ ಗಿಡ್ಡನೆಯ ಕಾಯಿ, ಎರಡು ಬೀಜದ ಉದ್ದನೆಯ ಕಾಯಿ, ಬಾದಾಮಿ ಕಾಯಿ, ಕಡುಮಣ್ಣಿನ ಬಣ್ಣದ ಕಾಯಿ, ಹುರಿದ ಮತ್ತು ಬೇಯಿಸಿದ ಕಡಲೆಕಾಯಿ ಹೀಗೆ ತರಹೇವಾರಿ ಕಡಲೆಕಾಯಿ ಗ್ರಾಹಕರನ್ನು ಆಕರ್ಷಿಸುತ್ತಿವೆ.ಪ್ರತಿ ವರ್ಷ ಕೃಷಿ ಚಟುವಟಿಕೆ ಪೂರ್ಣಗೊಂಡ ನಂತರ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ರೈತರು ಬೆಳೆದ ಕಡಲೆಕಾಯಿ ತಂದು ದೇವರಿಗೆ ಸಮರ್ಪಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಹೊರ ರಾಜ್ಯಗಳಿಂದಲೂ ರೈತರು ಮತ್ತು ವ್ಯಾಪಾರಿಗಳು ಬರುತ್ತಿದ್ದಾರೆ’ ಎಂದು ಅರ್ಚಕ ಚಿದಂಬರ ಶಾಸ್ತ್ರಿ ತಿಳಿಸಿದರು.

ಈ ವರ್ಷ ಕಡಲೆಕಾಯಿ ಬಿತ್ತನೆಯ ಸಮಯದಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾದ ಕಾರಣ ಇಳುವರಿಯೂ ಹೆಚ್ಚಿದೆ. ಹಾಗಾಗಿ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರತಿ ಮೂಟೆಯ ಮೇಲೆ ₹ 400 ರಿಂದ ₹ 500 ಕಡಿಮೆ ಇದೆ’ ಎನ್ನುತ್ತಾರೆ ಮಾಲೂರಿನ ರೈತ ಮಂಜುನಾಥ್.ಬೇರೆಡೆಗಳಲ್ಲಿ ದೊರೆಯುವ ಕಡಲೆಕಾಯಿಗೆ ಹೋಲಿಸಿದರೆ, ಪರಿಷೆ ಯಲ್ಲಿ ಮಾರಾಟವಾಗುವ ಕಡಲೆ ಕಾಯಿಗೆ ಬೆಲೆ ತುಸು ಹೆಚ್ಚಾಗಿಯೇ ಇದೆ. ಆದರೂ ಜಾತ್ರೆಯಲ್ಲಿ ಕೊಳ್ಳುವುದು ನಮ್ಮ ಸಂಸ್ಕೃತಿಯ ಭಾಗವಾಗಿರುವು ದರಿಂದ ಕನಿಷ್ಠ 1 ಸೇರನ್ನಾದರೂ ಕೊಂಡೊಯ್ಯುತ್ತೇನೆ ಎನ್ನುತ್ತಾರೆ ಚಾಮರಾಜಪೇಟೆ ನಿವಾಸಿ ಶಿವು.

 

Edited By

Shruthi G

Reported By

Shruthi G

Comments