ಸತ್ಯಾಂಶ ಮುಚ್ಚಿಟ್ಟರೆ ನಾನಂತೂ ಸುಮ್ಮನಿರುವುದಿಲ್ಲ : ಎಚ್ ಡಿಕೆ ಆಕ್ರೋಶ

09 Nov 2017 12:45 PM | General
4508 Report

ಸದನ ಸಮಿತಿ ನಾಮ್‌ಕೆವಾಸ್ತೆ ವರದಿ ಮಂಡಿಸಲು ಸಿದ್ಧತೆ ನಡೆಸಿದೆ ಎಂಬ ಮಾಹಿತಿ ಬಂದಿದೆ. ಆದರೆ, ವರದಿಯಲ್ಲಿ ಸತ್ಯಾಂಶ ಮುಚ್ಚಿಟ್ಟರೆ ನಾನಂತೂ ಸುಮ್ಮನಿರುವುದಿಲ್ಲ. 25 ವರ್ಷದ ಒಪ್ಪಂದ ರದ್ದುಪಡಿಸಿದ ಕಂಪನಿಯಿಂದಲೇ 2.20 ರೂ. ಪ್ರತಿ ಯೂನಿಟ್‌ಗೆ ಹೆಚ್ಚುವರಿಯಾಗಿ ಪಾವತಿಸಿ ಖರೀದಿಸುವ ಔಚಿತ್ಯವೇನಿತ್ತು ಎಂಬುದನ್ನು ದಾಖಲೆ ಸಮೇತ ಜನರ ಮುಂದಿಡಲಿದ್ದೇನೆ ಎಂದು ಮಾಜಿ ಸಿಎಂ,ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯುತ್‌ ಖರೀದಿ ಹಗರಣ ಆರೋಪದ ತನಿಖೆಗಾಗಿ ರಚಿಸಲಾಗಿದ್ದ ಸದನ ಸಮಿತಿ ವರದಿ ಮತ್ತೂಂದು ಸುತ್ತಿನ "ರಾಜಕೀಯ ಸಮರ' ಸ್ವರೂಪ ಪಡೆಯುವ ಸಾಧ್ಯತೆಯಿದ್ದು, ಸದನ ಸಮಿತಿಯ ಸದಸ್ಯರೂ ಆಗಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸದನ ಸಮಿತಿಗೆ ಸವಾಲು ಎಂಬಂತೆ ಪರ್ಯಾಯ ವರದಿ ಸಿದ್ಧಪಡಿಸಲು ಮುಂದಾಗಿದ್ದಾರೆ.ಅರ್ಕಾವತಿ ಡಿನೋಟಿಫಿಕೇಷನ್‌ ಹಗರಣಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಿದ್ದ ಪುಸ್ತಕದ ಮಾದರಿಯಲ್ಲೇ ವಿದ್ಯುತ್‌ ಖರೀದಿ ಹಗರಣ, ಸೋಲಾರ್‌ ಯೋಜನೆಯ ಟೆಂಡರ್‌ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಎರಡನ್ನೂ ಸೇರಿಸಿ "ವಿದ್ಯುತ್‌ ಖರೀದಿ-ಸೋಲಾರ್‌ ಟೆಂಡರ್‌ ಕರ್ಮಕಾಂಡ' ಹೆಸರಿ ನಲ್ಲಿ ಪುಸ್ತಕ ಬಿಡುಗಡೆ ಮಾಡಲು ತೀರ್ಮಾನಿಸಿದ್ದಾರೆ.

ಜೆಎಸ್‌ಡಬ್ಲೂ ಎನರ್ಜಿ ಲಿಮಿಟೆಡ್‌ ಸಂಸ್ಥೆಯು 25 ವರ್ಷಗಳ ಕಾಲ ಪ್ರತಿ ಯೂನಿಟ್‌ಗೆ 3.757 ರೂ.ನಿಂದ 3.888 ರೂ. ದರದಲ್ಲಿ ವಿದ್ಯುತ್‌ ಪೂರೈಕೆ ಮಾಡುತ್ತೇವೆ, ಕಲ್ಲಿದ್ದಲು ದರ, ಸಾಗಣೆ ದರ ಏನೇ ಹೆಚ್ಚಳವಾದರೂ ನಮ್ಮ ವಿದ್ಯುತ್‌ ಪೂರೈಕೆ ದರ ಮಾತ್ರ ಬದಲಾಗದು ಎಂದು ಹೇಳಿತ್ತು. ಆದರೆ ಎರಮರಸ್‌ ಹಾಗೂ ಯಡ್ಲಾಪುರ ಯೋಜನೆಯ ನೆಪ ಮುಂದಿಟ್ಟು ಆ ಕಂಪನಿಗೆ ನೀಡಿದ್ದ ಗುತ್ತಿಗೆಯನ್ನು ರದ್ದುಗೊಳಿಸಿದ್ದರಿಂದಲೇ ಸಾವಿರಾರು ಕೋಟಿ ರೂ. ನಷ್ಟವಾಗಿದೆ ಎಂದು ದಾಖಲೆ ಸಹಿತ ಸಾಬೀತುಪಡಿಸಲು ಮುಂದಾಗಿದ್ದಾರೆ.ಯಡ್ಲಾಪುರ ಯೋಜನೆಯಡಿ ಪ್ರತಿ ಯೂನಿಟ್‌ ವಿದ್ಯುತ್‌ಗೆ ಇದೀಗ 5.52 ರೂ. ವೆಚ್ಚ ಆಗುತ್ತಿರುವ ಬಗ್ಗೆ ಪ್ರಸ್ತಾಪಿಸಿ ಮುಂದಾಲೋಚನೆ ಇಲ್ಲದೆ ಒಪ್ಪಂದ ಮಾಡಿಕೊಂಡಿದ್ದರಿಂದ ರಾಜ್ಯ ಸರ್ಕಾರಕ್ಕೆ ನಷ್ಟವಾಗಿರುವುದನ್ನು ಉದಾಹರಣೆ ಸಮೇತ ತಿಳಿಸುವುದು ಕುಮಾರಸ್ವಾಮಿ ಉದ್ದೇಶ. 1580 ಮೆಗಾವ್ಯಾಟ್‌ ಖರೀದಿ ಕುರಿತ ದೀರ್ಘಾವದಿ ಒಪ್ಪಂದ ರದ್ದುಗೊಳಿಸಿದ ಸಂಸ್ಥೆಯಿಂದಲೇ 2011-12, 2012-13 ಹಾಗೂ 2013-14 ರಲ್ಲಿ ಪ್ರತಿ ಯೂನಿಟ್‌ಗೆ 4.26 ರಿಂದ 5.50 ರೂ.ವರೆಗೆ ದರ ನೀಡಿ ವಿದ್ಯುತ್‌ ಖರೀದಿಸಿರುವುದು ಮೇಲ್ನೋಟಕ್ಕೆ ವಿದ್ಯುತ್‌ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಅನುಮಾನ ಬರಲು ಪ್ರಮುಖ ಕಾರಣವಾಗಿದೆ.

ಇದೇ ವಿಚಾರವಾಗಿ ಕುಮಾರಸ್ವಾಮಿ ಸದನ ಸಮಿತಿಗೆ ಕೆಲವು ದಾಖಲೆ ಸಹ ನೀಡಿದ್ದಾರೆ. ಆದರೆ, ಯಾರೊಬ್ಬರ ಮೇಲೂ ಗುರುತರ ಆರೋಪ ಹೊರಿಸದೆ ಸಮಿತಿಯ ವರದಿಯು "ರಕ್ಷಣಾತ್ಮಕ'ವಾಗಿ ರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜೆಡಿಎಸ್‌ನವರ ಬಾಯಿ ಮುಚ್ಚಿಸುವ ಸಲುವಾಗಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕಲ್ಲಿದ್ದಲು ಪೂರೈಕೆಗೆ ನೀಡಿದ ಆದೇಶದಿಂದ 60 ಕೋಟಿ ರೂ. ರಾಜ್ಯ ಸರ್ಕಾರಕ್ಕೆ ನಷ್ಟವಾಗಿದೆ ಎಂದು ಬಿಜೆಪಿಯವರು ನೀಡಿರುವ ದೂರಿನ ಬಗ್ಗೆಯೂ ಪ್ರಸ್ತಾಪಿಸಿ ಆ ಕುರಿತೂ ಅಧ್ಯಾಯ ಸೇರಿಸುವ ಯತ್ನವೂ ನಡೆದಿದೆ ಎನ್ನಲಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿ "ವಿದ್ಯುತ್‌ ಖರೀದಿ ಹಾಗೂ ಸೋಲಾರ್‌ ಟೆಂಡರ್‌ ಕರ್ಮಕಾಂಡ' ಎಂದು ಪುಸ್ತಕ ರೂಪದಲ್ಲಿ ಜನರ ಮುಂದಿಡಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

 

 

Edited By

Shruthi G

Reported By

Shruthi G

Comments