ಸಿದ್ದಗಂಗಾ ಶ್ರೀಗಳ ಅದ್ವಿತೀಯ ಸೇವೆ ಗಿನ್ನಿಸ್ ದಾಖಲೆ ಸೇರಲಿದೆ

06 Nov 2017 3:49 PM | General
460 Report

ಶ್ರೀ ಸಿದ್ದಗಂಗಾ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾದ, ಜಗತ್ತು ಕಂಡ ಅದ್ಭುತ ಸಂತ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಡಾ.ಶ್ರೀ ಶಿವಕುಮಾರಸ್ವಾಮೀಜಿಗಳ ಸೇವೆ ಅಜರಾಮರ. ಅವರ ಸಾಧನೆ ಗಿನ್ನಿಸ್ ದಾಖಲೆ ಸೇರಲಿದೆ. ಶ್ರೀಗಳು ಸಿದ್ದಗಂಗಾ ಮಠದ ಆಧಿಪತ್ಯ (ದೀಕ್ಷೆ) ಪಡೆದು 88 ವರ್ಷಗಳು ಸಂದಿವೆ. ತ್ರಿಕಾಲ ಶಿವ ಪೂಜೆ ಮಾಡುವ ಅವರು 88 ವರ್ಷಗಳಲ್ಲಿ 96,426 ಕ್ಕೂ ಹೆಚ್ಚು ಬಾರಿ ತಮ್ಮನ್ನು ಶಿವಪೂಜೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಶ್ರೀಗಳು ದಿನಕ್ಕೆ ಆರು ಗಂಟೆ ಕಾಲ ಧ್ಯಾನ ಮತ್ತು ಪೂಜೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಅಂದರೆ ಅವರು ಸುಮಾರು 1.89.930ಗಂಟೆಗೂ ಅಧಿಕ ಸಮಯ ಧ್ಯಾನ ಮತ್ತು ಪೂಜೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶ್ರೀಗಳು ದಿನದಲ್ಲಿ 14 ಗಂಟೆಯನ್ನು ಸಮಾಜಸೇವೆಗೆ ಮೀಸಲಿಡುತ್ತಾರೆ. ಅಂದರೆ 88 ವರ್ಷದ ಸುಮಾರು 4.49.680 ಗಂಟೆಗಳಿಗೂ ಅಧಿಕವಾಗಿ ನಿರಂತರ ಸಮಾಜ ಸೇವೆ ಮಾಡಿದ್ದಾರೆ.16 ಎಕರೆ ಒಣ ಕೃಷಿ ಭೂಮಿಯಿಂದ ಶುರುವಾದ ಸಿದ್ದಗಂಗಾ ಮಠ ಇಂದು ಅಸಾಮಾನ್ಯವಾಗಿ ಬೆಳೆದು ನಿಂತಿದೆ. 1935ರಿಂದ 2017ರವರೆಗೆ ಈ ಮಠದಲ್ಲಿ 2,67,545 ವಿದ್ಯಾರ್ಥಿಗಳು ಉಳಿದುಕೊಂಡು ವಿದ್ಯಾಭ್ಯಾಸ ಪಡೆದುಕೊಂಡಿದ್ದಾರೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ 100ಕ್ಕೂ ಅಧಿಕ ವಿದ್ಯಾಸಂಸ್ಥೆಗಳಲ್ಲಿ ಸುಮಾರು 6,06,132 ವಿದ್ಯಾರ್ಥಿಗಳು ಶಿಕ್ಷಣ ಪಡೆದಿದ್ದಾರೆ. ಈ ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡಲು ಸುಮಾರು 23,845 ಶಿಕ್ಷಕರು ಶ್ರಮಿಸಿದ್ದಾರೆ.

ಅದೇ ರೀತಿ 23,845 ಬೋಧಕೇತರ ಸಿಬ್ಬಂದಿ ಕೂಡ ಸೇವೆ ಸಲ್ಲಿಸಿದ್ದಾರೆ. ಶ್ರೀಮಠಕ್ಕೆ 1935 ರಿಂದ 2016ರವರೆಗೆ ಬಂದಂತಹ ಭಕ್ತರ ಸಂಖ್ಯೆ 6,68,29,200 ದಾಟಿದೆ. ಇನ್ನು ಜಾತ್ರಾ ಸಮಯದಲ್ಲಿ ಇಲ್ಲಿ ದಾಸೋಹ ಸ್ವೀಕರಿಸಿದ ಭಕ್ತರ ಸಂಖ್ಯೆ 3,62,00,000 ಒಟ್ಟಾರೆ 23,12,64,000 ಜನ ಶ್ರೀಗಳ ಪಾದ ಸ್ಪರ್ಶಿಸಿ ಅವರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಸಿದ್ದಗಂಗಾ ಮಠದ ನಿವೃತ್ತ ಪ್ರಾಂಶುಪಾಲರಾದ ಪಿ.ಎಸ್.ಚಂದ್ರಶೇಖರಯ್ಯ ಎಂಬುವರು ಈ ಎಲ್ಲ ಅಂಶಗಳನ್ನು ಕ್ರೋಢೀಕರಿಸಿ ಶ್ರೀಗಳ ಸಾಧನೆಯನ್ನು ವಿಶ್ವಕ್ಕೆ ತೋರಿಸಿ ಮತ್ತು ಮುಂದಿನ ಪೀಳಿಗೆಗೆ ಸಂರಕ್ಷಿಸಿಡಲು ಸದ್ದಿಲ್ಲದೆ ಭರದಿಂದ ಶ್ರಮಿಸುತ್ತಿದ್ದಾರೆ. ಅಲ್ಲದೆ ಇಂತಹ ಬಹುದೊಡ್ಡ ಸಾಧನೆ ವಿಶ್ವದಾಖಲೆ ಸೇರಲಿದೆ.

 

Edited By

Shruthi G

Reported By

Shruthi G

Comments