ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಹತ್ತು ದಿನಗಳಲ್ಲಿ 'ಸಾಚಾರ್' ಅನುಷ್ಠಾನ: ಎಚ್ ಡಿಕೆ ಭರವಸೆ

06 Nov 2017 9:53 AM | General
510 Report

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ, ಕೇವಲ ಹತ್ತು ದಿನಗಳಲ್ಲಿ ಮುಸ್ಲಿಮರ ಪ್ರಗತಿಗೆ ಪೂರಕವಾಗಿರುವ 'ಸಾಚಾರ್ ಸಮಿತಿ ವರದಿ' ಅನುಷ್ಠಾನಗೊಳಿಸುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ರವಿವಾರ ನಗರದ ಹೊರವಲಯದ ಶಾನುಬೋಗನಹಳ್ಳಿಯಲ್ಲಿ ಬೆಂಗಳೂರಿನ ಸಅದಿಯ ವಿದ್ಯಾ ಸಂಸ್ಥೆಯ 15ನೆ ಸಂಭ್ರಮಾಚರಣೆಯ ಸ್ಫಟಿಕ ಮಹೋತ್ಸವ ಸಮಾರಂಭ ಹಾಗೂ ಫಿಝಾ ಸಮೂಹ ಸಂಸ್ಥೆಯ ಸಹಕಾರದೊಂದಿಗೆ ಅನಾಥ ನಿರ್ಗತಿಕ ಮಂದಿರವಾದ 'ಆಯಿಷಮ್ಮ ಮೆಮೋರಿಯಲ್' ಕಟ್ಟಡದ ಉದ್ಘಾಟನೆ ಮತ್ತು ಹಾಜಿ ಬಿ.ಎಂ.ಅಹ್ಮದ್ ಬಾವ ಮೆಮೋರಿಯಲ್ 'ಸಅದಿಯ ಹ್ಯಾಪಿ ಲಿವಿಂಗ್ ರೆನ್'ನ ಶಂಕು ಸ್ಥಾಪನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದಲಿತ ಸಮುದಾಯಕ್ಕಿಂತ ಮುಸ್ಲಿಮರು ಅತಿ ಹಿಂದುಳಿದಿದ್ದಾರೆ. ಅಲ್ಲದೆ, ಹಲವು ಮಂದಿಗೆ ಇನ್ನೂ ಕನಿಷ್ಠ ಸೌಲಭ್ಯವೇ ದೊರೆತಿಲ್ಲ. ಹೀಗಾಗಿ, ಮುಸ್ಲಿಮರಿಗೆ ಸಾಮಾಜಿಕ, ಶೈಕ್ಷಣಿಕ, ಉದ್ಯೋಗ ಮತ್ತು ರಾಜಕೀಯ ಮೀಸಲಾತಿ ಕಲ್ಪಿಸುವ ಜೊತೆಗೆ ಅಭಿವೃದ್ಧಿಗೆ ಪೂರಕವಾಗಿರುವ 'ಸಾಚಾರ್ ವರದಿ'ಯನ್ನು ಅನುಷ್ಠಾನಗೊಳಿಸಲು ನಾನು ಹಾಗೂ ನಮ್ಮ ಪಕ್ಷ ಬದ್ಧವಾಗಿದೆ ಎಂದು ನುಡಿದರು.

ಕೇಂದ್ರ ಸರಕಾರ ಉನ್ನತ ಮಟ್ಟದ ಸಮಿತಿಯೊಂದನ್ನು ನೇಮಿಸಿ ದೇಶದ ಮುಸ್ಲಿಮರ ಆರ್ಥಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಿ ವರದಿಯನ್ನು ಮಂಡಿಸುವಂತೆ ಅಧಿಕಾರ ನೀಡಿತ್ತು. ಅದರಂತೆ 2006 ರಲ್ಲಿ ಸಮಿತಿಯು ವರದಿಯನ್ನು ಸರಕಾರಕ್ಕೆ ನೀಡಿದೆ. ಆದರೆ, ಇಲ್ಲಿಯವರೆಗೆ ವರದಿ ಅನುಷ್ಠಾನಗೊಂಡಿಲ್ಲ. ಅಲ್ಲದೆ, ಇದು ಕೇಂದ್ರದಲ್ಲಿಯೇ ಅನುಷ್ಠಾನಗೊಳಿಸಬೇಕಿಲ್ಲ. ಬದಲಿಗೆ ಜೆಡಿಎಸ್ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಅನುಷ್ಠಾನ ಮಾಡುವುದಾಗಿ ಕುಮಾರ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮಾತನಾಡಿ, ತಂದೆ-ತಾಯಿ ಹೆಸರಿನಲ್ಲಿ ಬಡವರಿಗೆ ಸಹಾಯ ಮಾಡುವ ಚಿಂತನೆ ಹೆಚ್ಚಾಗಬೇಕು. ನಾವು ಮಾನವ ಕುಲಕ್ಕೆ ನಮ್ಮ ಜೀವನ ಆರ್ಪಿಸಿ ಸಮಾಜ ಸೇವೆ ಮಾಡುವುದನ್ನು ಸಂಕಲ್ಪ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.ದೇಶದಲ್ಲಿ ಶಾಂತಿ ಕದಡಿದೆ. ಈ ಬಗ್ಗೆ ನನಗೆ ಹೇಳುವ ಶಕ್ತಿಯೂ ಇದೆ.ಅಲ್ಲದೆ, ನಾನು ಆ 'ಅಲ್ಲಾಹು ಮತ್ತು ಈಶ್ವರನಿಗೆ ಬಿಟ್ಟರೆ' ಬೇರೆ ಯಾರಿಗೂ ಹೆದರುವುದಿಲ್ಲ ಎಂದ ಅವರು, ನಾನು ಈ ದೇಶ-ರಾಜ್ಯದ ಆಡಳಿತ ನಡೆಸಿದ್ದೇನೆ. ಈ ಎರಡು ಸಂದರ್ಭದಲ್ಲಿ ಯಾವುದೇ ಧರ್ಮ, ಜಾತಿಗಳ ಸಂಘರ್ಷಕ್ಕೆ ಅವಕಾಶ ನೀಡಲಿಲ್ಲ ಎಂದು ತಿಳಿಸಿದರು.

ಜೆಡಿಎಸ್ ಪ್ರಧಾನ ಕಾರ್ಯದರ್ಶಿ, ಫಿಝಾ ಸಮೂಹ ಸಂಸ್ಥೆಯ ಮಾಲಕ ಬಿ.ಎಂ.ಫಾರೂಕ್ ಮಾತನಾಡಿ, ಇತ್ತೀಚಿಗೆ ಅಲ್ಪಸಂಖ್ಯಾತರ ವಿಷಯಗಳಿಗೆ ಸಂಬಂಧಪಟ್ಟಂತೆ ದೇಶದಲ್ಲಿ ಗೊಂದಲ ಉಂಟಾಗಿದೆ. ಆದರೆ, ಈ ಹಿಂದೆ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಮುಸ್ಲಿಮರಿಗೆ ಶೇಕಡ 4 ರಷ್ಟು ಮೀಸಲಾತಿ ಕಲ್ಪಿಸಿದ್ದರು. ಇದರಿಂದ ಈ ಸಮುದಾಯ ಸ್ವಲ್ಪ ಮಟ್ಟಿಗೆ ಶೈಕ್ಷಣಿಕವಾಗಿ ಮುಂದಾಗಲು ಕಾರಣವಾಯಿತು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಅದಿಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸೈಯದ್ ಆಟಕೋಯ ತಂಙಳ್ ಕುಂಬೋಳ್, ಪ್ರಧಾನ ಕಾರ್ಯದರ್ಶಿ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ, ಸಂಸದ ಪುಟ್ಟರಾಜು, ಶಾಸಕ ಬಿ.ಬಿ.ನಿಂಗಯ್ಯ, ಪರಿಷತ್ ಸದಸ್ಯ ಟಿ.ಎ. ಶರವಣ, ಪಾಲಿಕೆ ಸದಸ್ಯ ಇಮ್ರಾನ್ ಪಾಷಾ, ಡಾ.ಅನ್ವರ್ ಶರೀಫ್, ಎಸ್‌ಎಸ್‌ಎಫ್ ಅಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಸೇರಿ ಪ್ರಮುಖರಿದ್ದರು.

 

Edited By

Shruthi G

Reported By

Shruthi G

Comments