ನಾಳೆ ರಾಜ್ಯಾದ್ಯಂತ ಡಾಕ್ಟರ್ ಪ್ರತಿಭಟನೆ ನಡೆಸುವುದರಿಂದ ಡಾಕ್ಟರ್ ಸಿಗಲ್ಲ...!

02 Nov 2017 4:16 PM | General
573 Report

ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ತಿದ್ದುಪಡಿ ವಿಧೇಯಕದ ವಿರುದ್ದ ನಾಳೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಭಾರತೀಯ ವೈದ್ಯಕೀಯ ಸಂಘಗಳ ಒಕ್ಕೂಟ ತಿಳಿಸಿದೆ.

ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತಂದರೆ ಇದು ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಆಸ್ಪತ್ರೆಗಳ ಮೇಲೆ ಗಂಭೀರ ಪರಿಣಾಮ ಉಂಟಾಗುವುದರಿಂದ ಕಾಯ್ದೆ ಜಾರಿ ವಿರೋಧಿಸಿ ನವೆಂಬರ್ 3ರಂದು ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಒಕ್ಕೂಟದ ಪ್ರಕಟಣೆ ತಿಳಿಸಿದೆ. ಈ ಹಿಂದೆ ಕಾಯ್ದೆ ಜಾರಿಗೆ ತಂದರೆ ಏನು ತೊಂದರೆಯಾಗುತ್ತದೆ ಎಂಬ ಬಗ್ಗೆ ಮುಖ್ಯಮಂತ್ರಿಗಳು, ಆರೋಗ್ಯ ಮಂತ್ರಿಗಳು ಜಂಟಿ ಸದನ ಸಮಿತಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದೆವು. ಆದಾಗ್ಯೂ ಸರ್ಕಾರ ನಮ್ಮ ಅಹವಾಲನ್ನು ಕಿವಿಗೆ ಹಾಕಿಕೊಳ್ಳದೆ ಕಾಯ್ದೆ ಜಾರಿಗೆಗೆ ಮುಂದಾಗಿದೆ. ಈ ಕಾಯ್ದೆಯನ್ನು ಒಂದು ವೇಳೆ ಸರ್ಕಾರ ಜಾರಿಗೆ ತಂದರೆ ನಾವು ನಮ್ಮ ವೃತ್ತಿಯನ್ನೇ ತ್ಯಜಿಸಬೇಕಾಗುತ್ತದೆ. ಅದರಿಂದಾಗುವ ಪರಿಣಾಮಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಸಂಘಟನೆ ಹೇಳಿದೆ.
ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತಂದಿದ್ದೇ ಆದರೆ ವೈದ್ಯರು ನೆಮ್ಮದಿಯಿಂದ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ. ಚಿಕಿತ್ಸಾ ವೈಫಲ್ಯದಿಂದಾಗಿ ಆಸ್ಪತ್ರೆಗಳ ವೆಚ್ಚದ ಏರುಪೇರಿನ ಕಾರಣಕ್ಕೆ ವೈದ್ಯರಿಗೆ ಜೈಲು ಶಿಕ್ಷೆ ಮತ್ತು ದಂಡ ಎಂದಾದರೆ ನಾವು ಸದುದ್ದೇಶದಿಂದ ಚಿಕಿತ್ಸೆ ನೀಡಿದ ತಪ್ಪಿಗೆ ಅಕಸ್ಮಾತ್ ಅನಾಹುತಗಳಾದರೂ ನಾವು ಜೈಲು ಪಾಲಾಗುವುದು ಸರಿಯೇ. ಇಂತಹ ಕಾಯ್ದೆಯಿಂದ ಸಾರ್ವಜನಿಕರು ವೈದ್ಯರನ್ನು ಕೊಲೆಗಾರರೆಂದೇ ಭಾವಿಸುವ ಅಪಾಯವಿದೆ.

ದರ ನಿಗದಿ ಮಾಡುವ ತೀರ್ಮಾನ ಕೈಗೊಂಡು ಖಾಸಗಿ ಆಸ್ಪತ್ರೆಗಳ ಹಕ್ಕನ್ನು ಕಸಿದುಕೊಳ್ಳಬಾರದು. ಆಸ್ಪತ್ರೆಗಳನ್ನು ನಿಯಂತ್ರಿಸುವುದಾದರೆ ಈ ಹಿಂದೆ 2010ರಲ್ಲಿ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಕೇಂದ್ರದ ಕ್ಲಿನಿಕಲ್ ಎಸ್ಟಾಬ್ಲಿಷ್‍ಮೆಂಟ್ ಕಾಯ್ದೆಯನ್ನು ಜಾರಿಗೆ ತನ್ನಿ. ಕೇರಳ ಸರ್ಕಾರ ಈಗಾಗಲೇ ಅದನ್ನು ಜಾರಿಗೆ ತಂದಿದೆ ಎಂದು ಹೇಳಿದೆ.  ಈ ಹಿನ್ನೆಲೆಯಲ್ಲಿ ವೈದ್ಯರು ಮತ್ತು ಆಸ್ಪತ್ರೆಗಳಿಗೆ ಧಕ್ಕೆ ಉಂಟು ಮಾಡುವ ಕರಾಳ ಕಾಯ್ದೆಗಳನ್ನು ತರಕೂಡದು ಎಂದು ಖಂಡಿಸಿ ನಾಳೆ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಸುಮಾರು 15 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ನಾಳೆ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ಪ್ರಕಟಣೆ ತಿಳಿಸಿದೆ.

Edited By

Hema Latha

Reported By

Madhu shree

Comments