ಎಚ್ ಡಿಕೆ ನಾಯಕತ್ವದಲ್ಲಿ ಅಧಿಕಾರಕ್ಕೆ ಬರಲೇಬೇಕೆಂಬ ಶಪಥ : ದೇವೇಗೌಡರು

31 Oct 2017 9:51 AM | General
307 Report

ಮುಂದಿನ ವಿಧಾನಸಭೆ ಚುನಾವಣೆ ನಂತರ ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಹಾಗೂ ತಾವು ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುವುದಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು. ನಿನ್ನೆ ಜೆಪಿ ಭವನದಲ್ಲಿ ಜೆಡಿಎಸ್ ಪಕ್ಷಕ್ಕೆ ಸಿಂಧ್ಯಾ ಅವರನ್ನು ಬರ ಮಾಡಿಕೊಂಡು ನಂತರ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಯಕತ್ವದಲ್ಲಿ ಎಲ್ಲರೂ ಅಧಿಕಾರಕ್ಕೆ ಬರಲೇಬೇಕೆಂಬ ಶಪಥ ಮಾಡುತ್ತೇವೆ ಎಂದರು.

ಜೆಪಿ ಭವನದಲ್ಲಿ ಎಲ್ಲ ವಿಭಾಗಕ್ಕೂ ಕೊಠಡಿಗಳನ್ನು ಮೀಸಲಿಡಲಾಗಿದೆ. ಕಚೇರಿಯಲ್ಲಿ ಶಿಸ್ತುಬದ್ಧವಾಗಿ ಕೆಲಸ ನಡೆಯಬೇಕು. ಸಿಂಧ್ಯಾ ಮತ್ತು ತಮ್ಮ ಸ್ನೇಹ 1975ರಿಂದ ಆರಂಭವಾಗಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ತಮ್ಮನ್ನು ಜೈಲಿಗೆ ಹಾಕಿದ್ದರು. ಕಳೆದ ಹಲವು ದಿನಗಳಿಂದ ಪಕ್ಷದಲ್ಲಿ ಸಕ್ರಿಯರಾಗುವಂತೆ ಸಿಂಧ್ಯಾ ಅವರಲ್ಲಿ ಮನವಿ ಮಾಡಿದ್ದೆ. ಇಂದು ಕಾಲ ಕೂಡಿ ಬಂದಿದೆ ಎಂದು ಅವರು ಹೇಳಿದರು. ಸಿಂಧ್ಯಾ ಮಾತನಾಡಿ, ಪಕ್ಷದ ಕಚೇರಿಗೆ ಜೆಪಿಭವನ ಎಂದು ನಾಮಕರಣ ಮಾಡಿದ್ದಕ್ಕೆ ಪಕ್ಷದ ಎಲ್ಲ ನಾಯಕರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಕಳೆದೆರಡು ವರ್ಷಗಳಿಂದಲೂ ದೇವೇಗೌಡರು ನನ್ನ ಆಹ್ವಾನಿಸಿದರು. ಜೆಡಿಎಸ್‍ನಲ್ಲಿ ಸಕ್ರಿಯವಾಗಿರಲು ಎಲ್ಲರ ಅಭಿಪ್ರಾಯವಿತ್ತು. ಕಾವೇರಿ ನದಿನೀರಿನ ವಿಚಾರದಲ್ಲಿ ಗೌಡರ ಹೋರಾಟ ಶ್ಲಾಘನೀಯ. ಕುಮಾರಸ್ವಾಮಿ ಅವರು ಕರ್ನಾಟಕದ ಆಸ್ತಿಯಾಗಿದ್ದು ಅವರ ಆರೋಗ್ಯ ಸುಧಾರಿಸಬೇಕು ಎಂದರು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ನಿಮ್ಮೊಂದಿಗೆ ಬರುವುದಿಲ್ಲವೆಂದು ನೇರವಾಗಿಯೇ ಹೇಳಿದ್ದೆ. ಆದರೂ ಮರುದಿನ ಬಂದು ನನಗೆ ಆಹ್ವಾನ ನೀಡಿದ್ದು ಅವರ ದೊಡ್ಡ ಮನಸ್ಸು ಎಂದರು. ಇನ್ನು ಮುಂದೆ ಜೆಡಿಎಸ್‍ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ. ಯಾವುದೇ ಸ್ಥಾನಮಾನದ ಬೇಡಿಕೆಯಿಲ್ಲ. ರಾಜ್ಯ ಪ್ರವಾಸ ಮಾಡಿ ರಾಷ್ಟ್ರ ಮಟ್ಟದಲ್ಲಿ ನನ್ನ ಶಕ್ತಿಯನ್ನು ಬಳಕೆ ಮಾಡುತ್ತೇನೆ ಎಂದು ಹೇಳಿದರು. ಚುನಾವಣೆಯಲ್ಲಿ ತಾವು ಸೋತ ಬಳಿಕ ನಿಷ್ಕ್ರಿಯವಾಗಿದ್ದೆ. ಜೆಡಿಎಸ್‍ನ ಹಲವು ಪ್ರಮುಖರಿಗೆ ನೋವು ಮಾಡಿದ್ದೇನೆ. ಎಲ್ಲರಿಗೂ ಕ್ಷಮೆ ಯಾಚಿಸುತ್ತೇನೆ ಎಂದರು. ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಉದ್ದೇಶದಿಂದ ಪಕ್ಷಕ್ಕೆ ಮರಳಿಲ್ಲ. 8-10 ಕ್ಷೇತ್ರಗಳಲ್ಲಿ ತಮ್ಮ ಬೆಂಬಲಿಗರು ಸ್ಪರ್ಧೆ ಮಾಡುವಂತೆ ಆಗ್ರಹಿಸಿದ್ದಾರೆ. ಸ್ಪರ್ಧೆ ಮಾಡುವ ವಿಚಾರ ಮನಸ್ಸಿನಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.

Edited By

Shruthi G

Reported By

Shruthi G

Comments