ಹನುಮಂತರಾಯಪ್ಪರವನ್ನು ಸೆಳೆಯಲು ಬಿಜೆಪಿ, ಜೆಡಿಎಸ್ ಕಸರತ್ತು

28 Oct 2017 1:23 PM | General
566 Report

ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಯಾಗದಿದ್ದರೂ ಈಗಾಗಲೇ ಎಲ್ಲಾ ಪಕ್ಷಗಳು ಕಸರತ್ತುಗಳನ್ನು ಪ್ರಾರಂಭಿಸಿವೆ. ಜೊತೆಗೆ ಪಕ್ಷಾಂತರ ಪರ್ವವೂ ಭರ್ಜರಿಯಾಗೇ ನಡೆಯಲಾರಂಭಿಸಿದೆ. ರಾಜರಾಜೇಶ್ವರಿ ನಗರದಲ್ಲಿ ಚುನಾವಣಾ ಕಾವು ಈಗಾಗಲೇ ಪ್ರಾರಂಭವಾಗಿದ್ದು, ಹಾಲಿ ಶಾಸಕ ಮುನಿರತ್ನನಾಯ್ಡು ಅವರನ್ನು ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್ ರಣತಂತ್ರವನ್ನು ರೂಪಿಸುತ್ತಿವೆ.

ಇದಕ್ಕೆ ಪೂರಕ ಎಂಬಂತೆ ಈ ಹಿಂದೆ ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಕೆಲವೇ ಮತಗಳ ಅಂತರದಲ್ಲಿ ಸೋಲನುಭವಿಸಿದ್ದ ಸಮಾಜಸೇವಕ ಹನುಮಂತರಾಯಪ್ಪ ಅವರನ್ನು ಸೆಳೆಯಲು ಬಿಜೆಪಿ, ಜೆಡಿಎಸ್ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿವೆ. ಹನುಮಂತರಾಯಪ್ಪ ಅವರು ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಜೊತೆಗೆ ಕಳೆದ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಸೋಲನುಭವಿಸಿದ್ದರು. ಸಮಾಜ ಸೇವೆ ಮಾಡುತ್ತಾ ಜನರ ಮನಸ್ಸಿನಲ್ಲಿರುವುದರಿಂದ ಕ್ಷೇತ್ರದ ಮತದಾರರಲ್ಲಿ ಅವರ ಮೇಲೆ ಅನುಕಂಪವಿದೆ.

ಅಲ್ಲದೆ ಈ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತಗಳು ಅಧಿಕವಾಗಿದ್ದು, ಈ ಮತಗಳೇ ನಿರ್ಣಾಯಕವಾಗಲಿವೆ. ಹಾಗಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹನುಮಂತರಾಯಪ್ಪ ಅವರನ್ನು ಸೆಳೆಯಲು ಯತ್ನಿಸುತ್ತಿವೆ. ಅವರನ್ನೇ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡುವ ನಿಟ್ಟಿನಲ್ಲೂ ಈ ಪಕ್ಷದ ಮುಖಂಡರು ಆಲೋಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಕಟ್ಟಾ ಬೆಂಬಲಿಗರಾಗಿದ್ದಾರೆ. ಜೊತೆಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಆಪ್ತರೂ ಹೌದು. ಹಾಗಾಗಿಯೇ 2013ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದರು.

ಆದರೆ ಅಂತಿಮಕ್ಷಣದಲ್ಲಿ ಅವರಿಗೆ ಟಿಕೆಟ್ ಕೈತಪ್ಪಿ ಹೋಗಿತ್ತು. ಆಗಿನಿಂದ ಇದುವರೆಗೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಮುನಿರತ್ನನಾಯ್ಡು ಮತ್ತು ಹನುಮಂತರಾಯಪ್ಪನವರ ಬೆಂಬಲಿಗರು ರಾಜಕೀಯ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಒಟ್ಟಾರೆ ಕಾಂಗ್ರೆಸ್‍ನಲ್ಲಿನ ಮುಸುಕಿನ ಗುದ್ದಾಟದ ಲಾಭ ಪಡೆಯಲು ಪೈಪೋಟಿ ನಡೆಸಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹನುಮಂತರಾಯಪ್ಪ ಅವರಿಗೆ ಗಾಳ ಹಾಕಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.ಈ ಸಂಬಂಧ ಅವರೊಂದಿಗೆ ಮಾತುಕತೆಯನ್ನೂ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಸದ್ಯಕ್ಕೆ ಹನುಮಂತರಾಯಪ್ಪ ಅವರು ಯಾವುದೇ ನಿರ್ಧಾರ ಕೈಗೊಳ್ಳದೆ ತಟಸ್ಥವಾಗಿರಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಸೇರಿದಂತೆ ಯಾವ ಪಕ್ಷದಲ್ಲಿ ತಮಗೆ ಮಾನ್ಯತೆ ಸಿಗುತ್ತದೋ ಆ ಪಕ್ಷಕ್ಕೆ ಸೇರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

Edited By

Shruthi G

Reported By

Shruthi G

Comments