ನವೆಂಬರ್ 15 ರಿಂದ ಜೆಡಿಎಸ್ ಚುನಾವಣಾ ಪ್ರಚಾರ ಪ್ರಾರಂಭ

23 Oct 2017 10:24 AM | General
406 Report

ಬೆಂಗಳೂರು : ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಜೆಡಿಎಸ್ ನವೆಂಬರ್ 15 ರಿಂದ ಚುನಾವಣಾ ಪ್ರಚಾರವನ್ನು ಆರಂಭಿಸಲಿದೆ. ಇದಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಿರುವ ಬಸ್ಸನ್ನು ಸಜ್ಜುಗೊಳಿಸಲಾಗಿದೆ. ಮೈಸೂರಿನ ಚಾಮುಂಡೇಶ್ವರಿದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆನಂತರ ಮೈಸೂರಿನಿಂದಲೇ ಚುನಾವಣಾ ಪ್ರಚಾರವನ್ನು ಆರಂಭಿಸಲು ಉದ್ದೇಶಿಸಲಾಗಿದೆ. ನಂತರ ರಾಜ್ಯಾದ್ಯಂತ ಚುನಾವಣಾ ಪ್ರಚಾರವನ್ನು ವಿಸ್ತರಿಸಲಾಗುವುದು.

ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿ ಪಡೆಯುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನವೆಂಬರ್ ಮೊದಲ ವಾರದಲ್ಲೇ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧಿಸಲು ಉದ್ದೇಶಿಸಿರುವ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದಲೇ ಚುನಾವಣಾ ಪ್ರಚಾರವನ್ನು ಆರಂಭಿಸಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ನವೆಂಬರ್ 15 ರಿಂದ ನಿರಂತರವಾಗಿ ಚುನಾವಣಾ ಪ್ರಚಾರವನ್ನು ಕ್ಷೇತ್ರವಾರು ಕುಮಾರಸ್ವಾಮಿ ಕೈಗೊಳ್ಳಲಿದ್ದು, ಇದಕ್ಕೂ ಮುನ್ನ ನವೆಂಬರ್ 3 ರಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಾಂಕೇತಿಕ ಚುನಾವಣಾ ಪ್ರಚಾರವನ್ನು ನಡೆಸಲಿದ್ದಾರೆ. ಅಂದು ಕುಟುಂಬ ಸಮೇತವಾಗಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಆನಂತರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ಕುಮಾರಸ್ವಾಮಿ ನಡೆಸಲಿದ್ದಾರೆ. ಜೊತೆಗೆ ರೋಡ್‍ಶೋ ಕೂಡ ನಡೆಸಲು ಉದ್ದೇಶಿಸಿದ್ದಾರೆ.

ತಮ್ಮ ಪತ್ನಿ ಹಾಗೂ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ಪುತ್ರ ಹಾಗೂ ನಾಯಕ ನಟ ನಿಖಿಲ್ ಕುಮಾರಸ್ವಾಮಿ ಕೂಡ ಚಾಮುಂಡೇಶ್ವರಿ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡ ಈಗಾಗಲೇ ಚುನಾವಣಾ ಪ್ರಚಾರಕ್ಕೆ ಅಣಿಯಾಗುತ್ತಿದ್ದಾರೆ. ಮೈಸೂರಿನಿಂದ ಚುನಾವಣಾ ಪ್ರಚಾರವನ್ನು ಆರಂಭಿಸಲಿರುವ ಜೆಡಿಎಸ್ ರಾಜ್ಯಾದ್ಯಂತ ನಿರಂತರವಾಗಿ ನಡೆಸಲಾಗುತ್ತದೆ. ಈಗಾಗಲೇ ಚುನಾವಣಾ ಕಾರ್ಯತಂತ್ರಗಳನ್ನು ಆರಂಭಿಸಿದೆ. ಪಕ್ಷವನ್ನು ಬಲಗೊಳಿಸಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಎಸ್ ವರಿಷ್ಠರು ಹಗಲಿರುಳು ಶ್ರಮಿಸುತ್ತಿದ್ದಾರೆ.ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಸರಿಸಮನಾಗಿ ಪ್ರಬಲ ಸ್ಪರ್ಧೆಯನ್ನು ವಿಧಾನಸಭೆ ಚುನಾವಣೆಯಲ್ಲಿ ಒಡ್ಡಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಜೆಡಿಎಸ್ ಮಾಡಿಕೊಳ್ಳುತ್ತಿದೆ.

 

Edited By

Shruthi G

Reported By

Shruthi G

Comments