ಶಾಸಕರಿಗೆ ಚಿನ್ನದ ಬಿಸ್ಕೆಟ್, ಬೆಳ್ಳಿ ತಟ್ಟೆ ಇಲ್ಲ : ಕೆಬಿ ಕೋಳಿವಾಡ್

17 Oct 2017 6:08 PM | General
360 Report

ವಿಧಾನ ಸೌಧಕ್ಕೆ 75 ವರ್ಷ ತುಂಬಿರುವ ಹಿನ್ನಲೆಯಲ್ಲಿ ಹಮ್ಮಿಕೊಂಡಿರುವ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಶಾಸಕರಿಗೆ ಚಿನ್ನದ ನಾಣ್ಯ ನೀಡುವ ಪ್ರಸ್ತಾಪವಿಲ್ಲ ಎಂದು ವಿಧಾನಸಭಾಧ್ಯಕ್ಷ ಕೆ.ಬಿ ಕೋಳಿವಾಡ್ ಸ್ಪಷ್ಟಪಡಿಸಿದ್ದಾರೆ…

ವಿಧಾನಸೌಧ ವಜ್ರಮಹೋತ್ಸವ, ಶಾಸಕರಿಗೆ ಚಿನ್ನದ ಬಿಸ್ಕತ್ ಭಾಗ್ಯ? ಇದೇ ವೇಳೆ ಅಧಿಕಾರಿಗಳಿಗೆ ಬೆಳ್ಳಿಯ ತಟ್ಟೆಯನ್ನೂ ನೀಡುತ್ತಿಲ್ಲ ಕೋಳಿವಾಡ್ ಹೇಳಿದ್ದಾರೆ. ಇದೇ ಅಕ್ಟೋಬರ್ 25-26ರಂದು ವಿಧಾನಸಭೆ ವಜ್ರಮಹೋತ್ಸವ ಕಾರ್ಯಕ್ರಮ ನಡೆಯಲಿದ್ದು ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡಲಿದ್ದಾರೆ.ವಿಧಾನಸೌಧದ ವಜ್ರಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳಿಗೆ ಸುಮಾರು 27 ಕೋಟಿ ರೂಪಾಯಿ ಅಂದಾಜು ವೆಚ್ಚದ ಪಟ್ಟಿ ಸಿದ್ದಪಡಿಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೇ ಕಾರ್ಯಕ್ರಮದಲ್ಲಿ ವಜ್ರಮಹೋತ್ಸವದ ಸವಿನೆನಪಿಗಾಗಿ ಶಾಸಕರಿಗೆ 50 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಬಿಸ್ಕತ್ ನೀಡಲು ಸಿದ್ಧತೆ ನಡೆಸಲಾಗಿತ್ತು. ಜತೆಗೆ ವಿಧಾನಸೌಧದ ಸಿಬ್ಬಂದಿಗೆ ತಲಾ 5 ಸಾವಿರ ರೂ. ಮೌಲ್ಯದ ಬೆಳ್ಳಿತಟ್ಟೆ ಉಡುಗೊರೆಯಾಗಿ ನೀಡಲು ಪ್ಲಾನ್ ಹಾಕಿಕೊಳ್ಳಲಾಗಿತ್ತು.

ಆದರೆ ಇದೀಗ ಈ ಪ್ರಸ್ತಾವನೆಯನ್ನು ಕೈಬಿಡಲಾಗಿದೆ. ಹೀಗಾಗಿ ವಿಧಾನಮಂಡಲದ ಉಭಯ ಸದನಗಳ 300 ಸದಸ್ಯರಿಗೆ ವಿಧಾನಸೌಧದ ಲಾಂಛನ ಒಳಗೊಂಡಿರುವ ಚಿನ್ನದ ಬಿಸ್ಕತ್‌ ಹಾಗೂ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ರಾಜಭವನ ಮತ್ತು ವಿಶ್ವೇಶ್ವರಯ್ಯ ಗೋಪುರಗಳಲ್ಲಿ ಕೆಲಸ ಮಾಡುವ ಸುಮಾರು 5 ಸಾವಿರ ಸಿಬ್ಬಂದಿಗೆ ಬೆಳ್ಳಿ ತಟ್ಟೆಗಳನ್ನು ನೀಡಲಾಗುತ್ತಿಲ್ಲ.


Edited By

Suresh M

Reported By

Suresh M

Comments