ರಾಷ್ಟ್ರಪ್ರಶಸ್ತಿ ವಾಪಸ್ ಮಾಡುವುದಿಲ್ಲ : ಪ್ರಕಾಶ್ ರೈ ಸ್ಪಷ್ಟನೆ

03 Oct 2017 12:32 PM | General
393 Report

ನನಗೆ ಬಂದಿರುವ ರಾಷ್ಟ್ರ ಪ್ರಶಸ್ತಿಗಳನ್ನು ವಾಪಸ್ ಮಾಡುವಂತ ಮೂರ್ಖ ನಾನಲ್ಲ, ನನ್ನ ಕೆಲಸಕ್ಕೆ ಸಿಕ್ಕಿರುವ ಪ್ರತಿಫಲ, ಪ್ರಶಸ್ತಿ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಪ್ರಕಾಶ್ ರೈ ಹೇಳಿದ್ದಾರೆ. ಗೌರಿ ಲಂಕೇಶ್ ಹತ್ಯೆಯನ್ನು ಸಂಭ್ರಮಿಸಿದವರು ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ಅಧಿಕೃತ ಟ್ವಿಟ್ಟರ್ ನಲ್ಲಿ ಫಾಲೋವರ್ ಆಗಿದ್ದಾರೆ ಎಂದು ಕಿಡಿಕಾರಿದರು.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಪ್ರಧಾನಿ ಮೌನ ಪ್ರಶ್ನಿಸಿ ನಟ ಪ್ರಕಾಶ್ ರೈ ನೀಡಿದ್ದ ಹೇಳಿಕೆಯಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಗೊಳಗಾದ ನಂತರ ರೈ ಸ್ಪಷ್ಟನೆ ನೀಡಿದ್ದಾರೆ. ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ವಿಡಿಯೋ ಮೂಲಕ ಪ್ರಕಾಶ್ ರೈ ಸ್ಪಷ್ಟನೆ ನೀಡಿದ್ದಾರೆ, ಗೌರಿ ಲಂಕೇಶ್ ಮತ್ತು ಕಲಬುರಗಿ ಅವರನ್ನು ಯಾರು ಕೊಂದರು ಎಂಬುದು ನಮಗೆ ತಿಳಿದಿಲ್ಲ, ಅದನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ, ಮತ್ತು ಎಸ್‌ಐಟಿ ಇದೆ, ಆದರೆ ಯಾರು ಹತ್ಯೆಯನ್ನು ಸಂಭ್ರಮಿಸಿದರು ಎಂಬದು ತಿಳಿದಿದೆ, ಅದರ ಬಗ್ಗೆ ನನಗೆ ನೋವಿದೆ, ಅದರ ಬಗೆಗಿನ ಅಸಮಾಧಾನ ಹೊರ ಹಾಕಿದ್ದಕ್ಕೆ ನನ್ನ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿ ನನ್ನನ್ನು ಟ್ರೋಲ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಸಂಭ್ರಮಿಸಿದವರು ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ಅಧಿಕೃತ ಟ್ವಿಟ್ಟರ್ ನಲ್ಲಿ ಹಿಂಬಾಲಿಸುವವರಾಗಿದ್ದಾರೆ ಎಂದು ಕಿಡಿ ಕಾರಿದ್ದಾರೆ. ದೇಶದ ಪ್ರದಾನಿಯಾಗಿ ಈ ಪ್ರಕರಣದ ಬಗ್ಗೆ ಅವರು ಮೌನವಾಗಿರುವುದು ನನಗೆ ನೋವು ತಂದಿದೆ. ನಾನು ಭಯಗೊಂಡಿದ್ದೇನೆ, ಇದರಿಂದ ನಾನು ವಿಚಲಿತನಾಗಿದ್ದೇನೆ ಎಂದು ಹೇಳಿದ್ದಾರೆ. ನಾನು ದೇಶದ ಒಬ್ಬ ನಾಗರಿಕ, ನಾನು ಯಾವುದೇ ಪಕ್ಷದ ವಿರೋಧಿಯಲ್ಲ, ನಾನು ನನ್ನ ದೇಶದ ಪ್ರಧಾನಿಯ ಬಗ್ಗೆ ಮಾತನಾಡುತ್ತಿದ್ದೇನೆ, ನನಗೆ ಈ ಬಗ್ಗೆ ಮಾತನಾಡುವ ಹಕ್ಕಿದೆ, ನಾನು ರಾಷ್ಟ್ರ ಪ್ರಶಸ್ತಿಗಳನ್ನು ವಾಪಸ್ ಮಾಡುತ್ತೇನೆ ಎಂದು ಹೇಳಿದ್ದೇನೆ ಎಂಬ ಆರೋಪ ಆಧಾರರಹಿತವಾದದ್ದು ಎಂದು ಸ್ಪಷ್ಟ ಪಡಿಸಿದ್ದಾರೆ.

Edited By

Suresh M

Reported By

Madhu shree

Comments