ಕಾವೇರಿ ವಿವಾದ: ಸುಪ್ರೀಂ ತೀರ್ಪು ಆತಂಕ ಹೆಚ್ಚಿಸಿದೆ ಎಂದು ಹೇಳಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು

19 Sep 2017 4:00 PM | General
1241 Report

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಎರಡು ತಿಂಗಳೊಳಗೆ ಸುಪ್ರೀಂ ಕೋರ್ಟ್ನಿಂದ ಬರುವ ತೀರ್ಪಿನಲ್ಲಿ ರಾಜ್ಯಕ್ಕೆ ಏನಾಗುವುದೋ ಎಂಬ ಆತಂಕ ಹೆಚ್ಚಿಸಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

ನಗರದ ವಿವಿ ಪುರಂನ ಕುವೆಂಪು ಕಲಾಕ್ಷೇತ್ರದಲ್ಲಿ ಒಕ್ಕಲಿಗರ ಸಂಘದ ಸಹಯೋಗದಲ್ಲಿ ನಡೆದ ಬರಹಗಾರ ಹ.ಕ.ರಾಜೇಗೌಡ ಅವರು ರಚಿಸಿರುವ ಒಕ್ಕಲಿಗರ ಸಂಘದ ಸ್ಥಾಪಕ ಕಾರ್ಯದರ್ಶಿ ಕೆ.ಎಚ್‌.ರಾಮಯ್ಯ ಕುರಿತಾದ 'ಅಪೂರ್ವ ಪುರುಷ ಸಿಂಹ' ಕೃತಿ ಬಿಡುಗಡೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಸೋಮವಾರ ಮಾತನಾಡಿದರು.

''ಈಗ ಹಂಚಿಕೆಯಾಗಿರುವ ಪ್ರಮಾಣಕ್ಕಿಂತ ಹೆಚ್ಚಿನ ನೀರು ದೊರೆತರೆ ಅದು ನಮ್ಮ ಗೆಲುವೇ ಆಗಿರುತ್ತದೆ. ಆದರೆ, ಇದೇ ಸ್ವರೂಪದಲ್ಲಿ ತೀರ್ಪು ಬರಲಿದೆ ಎಂದು ಊಹಿಸಲಾಗದು,'' ಎಂದರು.

''ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿ ಯೋಜನೆಗಳಿಗೆ ನಾನು ಅಧಿಕಾರದಲ್ಲಿದ್ದಾಗ ಏನೇನು ಕಾರ್ಯಕ್ರಮ ಹಮ್ಮಿಕೊಂಡಿದ್ದೇ ಎಂಬುದು ಅಲ್ಲಿನ ಜನರಿಗೆ ತಿಳಿದಿದೆ. ಆದರೆ, ಅದೇ ಭಾಗದವರು ಇಂದಿರಾ ಗಾಂಧಿಯವರನ್ನು ಬಂಗಾರದಲ್ಲಿ ತೂಗಿ ಕಳುಹಿಸಿದರೂ, ಆಲಮಟ್ಟಿ ಯೋಜನೆಗೆ ಒಂದು ರೂ. ಬಿಡುಗಡೆ ಮಾಡಲಿಲ್ಲ. ಇದರಿಂದಾಗಿ ಶೇ.18ರ ಬಡ್ಡಿದರದಲ್ಲಿ ಸಾಲ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕಾಯಿತು. ಅಣೆಕಟ್ಟಿನ ಎತ್ತರ ಹೆಚ್ಚಿಸುವಲ್ಲೂ ಹಲವು ಅಡೆ-ತಡೆ ಎದುರಿಸಬೇಕಾಯಿತು,'' ಎಂದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ''ಒಕ್ಕಲಿಗರು ತಮ್ಮ ಹೆಸರಿನ ಮುಂದೆ ಗೌಡ ಎಂದು ನಮೂದಿಸಿಕೊಂಡರೆ ಬೇರೆಯವರ ದೃಷ್ಟಿಯಲ್ಲಿ ಅವಕೃಪೆಗೆ ಒಳಗಾಗುವ ಸ್ಥಿತಿ ಇದೆ. ಆದರೆ, ನನ್ನ ವಿಷಯದಲ್ಲಿ ಅದು ತದ್ವಿರುದ್ಧವಾಯಿತು,'' ಎಂದರು.

Edited By

Shruthi G

Reported By

Shruthi G

Comments