ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ ಕಾರ್ಯಕ್ಕೆ ಚಾಲನೆ

15 Sep 2017 12:56 PM | General
211 Report

ಮೈಸೂರಿನ ಅರಮನೆಯಲ್ಲಿ ಸದ್ದಿಲ್ಲದೆ ನವರಾತ್ರಿ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಯದು ವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರ ಮಾರ್ಗದರ್ಶನ, ಪೊಲೀಸರ ಬಿಗಿ ಭದ್ರತೆಯಲ್ಲಿ ಸಿಂಹಾಸನಕ್ಕೆ ಇಂದು ಬೆಳಗ್ಗೆ 7.45ರಿಂದ 8.45ಕ್ಕೆ ನವಗ್ರಹ ಹೋಮ ನಡೆಸಲಾಯಿತು. ನಂತರ 9.45ರಿಂದ 10.15ರವರೆಗೆ ಶಾಂತಿ ಪೂಜೆ ಸಲ್ಲಿಸಿ ರತ್ನ ಖಚಿತ ಸಿಂಹಾಸನ ಜೋಡಣೆ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಸಿಂಹಾಸನ ಜೋಡಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಬೆಳಗ್ಗೆ 10ರಿಂದ ಮಧ್ಯಾಹ್ನ ಒಂದು ಗಂಟೆವರೆಗೆ ಅರಮನೆ ಪ್ರವೇಶವನ್ನು ನಿಷೇಧಿಸಲಾಗಿತ್ತು.

ನವರಾತ್ರಿ ಆರಂಭದ ದಿನವಾದ ಸೆ.21ರಂದು ಪೂಜಾ ಕಾರ್ಯಗಳು ನಡೆಯುವ ಹಿನ್ನೆಲೆಯಲ್ಲಿ ಅಂದು ಮಧ್ಯಾಹ್ನ 1.30ರವರೆಗೆ ಅರಮನೆಗೆ ಪ್ರವೇಶ ಇರುವುದಿಲ್ಲ. ಸೆ.29ರಂದು ಮಧ್ಯಾಹ್ನ 1.30ರವರೆಗೆ ಅರಮನೆ ಪ್ರವೇಶ ನಿಷೇಧಿಸಲಾಗಿದೆ.ರತ್ನ ಖಚಿತ ಸಿಂಹಾಸನ ಜೋಡಣೆ ಪ್ರಕ್ರಿಯೆ ನಡೆದಿದ್ದು, ರಾಜವಂಶಸ್ಥರು, ಖಾಸಗಿಯಾಗಿ ಅರಮನೆಯಲ್ಲಿ ಸಂಪ್ರದಾಯದಂತೆ ದಸರೋತ್ಸವ ಆಚರಿಸುತ್ತ ಬಂದಿದ್ದಾರೆ. ಇದರ ಪ್ರಮುಖ ಆಕರ್ಷಣೆಯೇ ರತ್ನ ಖಚಿತ ಸಿಂಹಾಸನ. ಈ ಸಿಂಹಾಸನವನ್ನು ಅರಮನೆಯ ಭದ್ರತಾ ಕೊಠಡಿಯಲ್ಲಿ ಬೇರ್ಪಡಿಸಿ ಇರಿಸಲಾಗಿದ್ದು, ಅದನ್ನು ಜೋಡಿಸುವ ಕಾರ್ಯಕ್ಕೆ ಇಂದು ಪೂಜಾ ವಿಧಿವಿಧಾನಗಳು ನಡೆಯಿತು. ದಸರಾ ಸಂದರ್ಭದಲ್ಲಿ ಮಾತ್ರ ಸಿಂಹಾಸನವನ್ನು ಜೋಡಿಸಿ ರಾಜವಂಶಸ್ಥರು ಇದರ ಮೇಲೆ ಕುಳಿತು ಖಾಸಗಿ ದರ್ಬಾರ್ ನಡೆಸುತ್ತಾರೆ. ಆನಂತರ ಅದನ್ನು ಪ್ರತ್ಯೇಕಗೊಳಿಸಿ ಅರಮನೆಯ ಭದ್ರತಾ ಕೊಠಡಿಯಲ್ಲಿ ಇರಿಸಲಾಗುತ್ತದೆ.

Courtesy: Dailyhunt

Comments