ಗೌರಿ ಹಂತಕನ ಗುರುತು ಪತ್ತೆ; ಸಿಸಿಟಿವಿಯಲ್ಲಿ ಸ್ಪಷ್ಟ ಚಿತ್ರಣ

15 Sep 2017 12:07 PM | General
363 Report

ಬೆಂಗಳೂರು: ಗೌರಿ ಲಂಕೇಶ್ ಹತ್ಯೆ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳಕ್ಕೆ (ಎಸ್ಐಟಿ) ಹಂತಕನ ಮುಖದ ಸ್ಪಷ್ಟ ಚಿತ್ರಣ ಲಭ್ಯವಾಗಿದೆ.

ಸೆಪ್ಟೆಂಬರ್‌ 5ರಂದು ಹತ್ಯೆ ನಡೆದ ವೇಳೆ ಗೌರಿ ಮನೆಯ ಸಿಸಿಟಿವಿಯಲ್ಲಿ ದಾಖಲಾದ ಚಿತ್ರಣವನ್ನು ತಂತ್ರಜ್ಞಾನದ ನೆರವಿನಿಂದ ಮತ್ತಷ್ಟು ಸ್ಪಷ್ಟಗೊಳಿಸಲಾಗಿದ್ದು, ಹಂತಕನ ಮುಖಚಹರೆಯನ್ನು ಗುರುತಿಸಲು ಎಸ್‌ಐಟಿಗೆ ಸಾಧ್ಯವಾಗಿದೆ.

'ಗೌರಿ ತಮ್ಮ ಮನೆಯ ಗೇಟು ತೆರೆಯುತ್ತಿರುವುದು, ಮನೆಯ ಕಡೆಗೆ ತಿರುಗುತ್ತಿರುವುದು, ಆಯುಧ ಹಿಡಿದ ಹಂತಕನ ಕಡೆಗೆ ತಿರುಗಿದ್ದು ಎಲ್ಲವೂ ಈ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹಂತಕ ಗುಂಡು ಹಾರಿಸುತ್ತಾನೆ, ಗುಂಡು ಗೌರಿಯ ಪಕ್ಕೆಲುಬುಗಳನ್ನು ಸೀಳುತ್ತದೆ. ಎರಡನೇ ಗುಂಡು ಪಕ್ಕೆಲುಬಿಗೆ ನಾಟುತ್ತದೆ. ಗೌರಿ ಎರಡು ಹೆಜ್ಜೆ ಹಿಂದಕ್ಕಿಡುತ್ತಾರೆ. ನಂತರ ಒಂದೆರಡು ಸುತ್ತು ತಿರುಗಿ 3-4 ಹೆಜ್ಜೆ ಹಿಂದಕ್ಕಿಡುತ್ತಾರೆ.

ಆಗ ಹಂತಕ ಇನ್ನೂ ಎರಡು ಹೆಜ್ಜೆ ಮುಂದಿಟ್ಟು ಮತ್ತೆ ಗುಂಡು ಹಾರಿಸುತ್ತಾನೆ. ಮೂರನೇ ಗುಂಡು ಗುರಿ ತಪ್ಪುತ್ತದೆ. ನಾಲ್ಕನೇ ಗುಂಡು ಆಕೆಯ ಬೆನ್ನಿನ ಮೂಲಕ ಪ್ರವೇಶಿಸಿ ಎದೆಯನ್ನು ಸೀಳಿ ಹೊರಬರುತ್ತದೆ' ಎಂದು ದೃಶ್ಯಾವಳಿ ವೀಕ್ಷಿಸಿದ ಮೂಲವೊಂದು ತಿಳಿಸಿದೆ.'ಮೂರನೇ ಗುಂಡು ತಾಗಿದ ಬಳಿಕ 30-60 ಸೆಕೆಂಡ್‌ಗಳ ಕಾಲ ಆಕೆ ಬದುಕಿರಬಹುದು ಅಷ್ಟೆ' ಎಂದು ಮೂಲ ತಿಳಿಸಿದೆ.

Courtesy: vijaya karnataka

Comments