ಹೆಣ್ಣು ಮಕ್ಕಳ ಶಿಕ್ಷಣ, ಸುರಕ್ಷತೆ ಮತ್ತು ಸಬಲೀಕರಣಕ್ಕಾಗಿ ಪ್ರತ್ಯೇಕ ನೀತಿ ಜಾರಿ

15 Sep 2017 9:54 AM | General
898 Report

ಬೆಂಗಳೂರು : ಹೆಣ್ಣು ಮಕ್ಕಳ ಶಿಕ್ಷಣ, ಸುರಕ್ಷತೆ ಮತ್ತು ಸಬಲೀಕರಣಕ್ಕಾಗಿ ರಾಜ್ಯದಲ್ಲಿ ಪ್ರತ್ಯೇಕ ನೀತಿ ಜಾರಿಗೊಳಿಸಲಾಗುವುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಇಂದಿಲ್ಲಿ ತಿಳಿಸಿದರು.

ವಿಧಾನಪರಿಷತ್ ವತಿಯಿಂದ ವಿಕಾಸ ಸೌಧದಲ್ಲಿ ಮಕ್ಕಳ ಹಕ್ಕುಗಳಿಗಾಗಿ ಶಾಸಕರ ಕ್ರಾಂತಿಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ನೀತಿ ಜಾರಿಗೊಳಿಸುವುದನ್ನು ಬಹಿರಂಗಪಡಿಸಿದರು. ರಾಜ್ಯ ಸರ್ಕಾರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚು ಹಣ ಖರ್ಚು ಮಾಡುತ್ತಿದೆ. ಬಾಲ್ಯ ವಿವಾಹ ಮತ್ತು ಎಚ್‍ಐವಿ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಿದೆ. ವಿಕಲಚೇತನ ತಾಯಂದಿರಿಗೆ ಮಾಸಿಕ 2000 ರೂ. ಪರಿಹಾರ ನೀಡಲಾಗುತ್ತಿದೆ ಎಂದರು.

ಬಾಲ್ಯ ವಿವಾಹ ತಡೆಯಲು ದೇಶದಲ್ಲಿ ಪ್ರಗತಿಪರವಾದ ತಿದ್ದುಪಡಿ ಕಾಯ್ದೆಯನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ. ಅದಕ್ಕೆ ರಾಷ್ಟ್ರಪತಿ ಅವರ ಅಂಕಿತ ಸಿಕ್ಕಿದೆ. ಈ ತಿದ್ದುಪಡಿ ಕಾಯ್ದೆ ಜಾರಿಗೆಯಾದ ನಂತರ ಬಾಲ್ಯ ವಿವಾಹ ಅಪರಾಧಕ್ಕಾಗಿ ಗರಿಷ್ಠ ಎರಡು ವರ್ಷ ಶಿಕ್ಷೆಯಾಗಲಿದೆ. ನಿಧಿಗಾಗಿ ಮಕ್ಕಳನ್ನು ಬಲಿ ನೀಡುವುದು, ಹರಕೆ ನೆಪದಲ್ಲಿ ಮಕ್ಕಳನ್ನು ಕೆಳಕ್ಕೆ ಬಿಸಾಡುವುದು, ಹೆಣ್ಣು ಮಕ್ಕಳನ್ನು ವೇಶ್ಯವಾಟಿಕೆಗೆ ದೂಡುವಂತಹ ಅನಿಷ್ಟಗಳನ್ನು ತಡೆಯಲು ಪ್ರಬಲವಾದ ಕಾಯ್ದೆ ಅಗತ್ಯವಿದೆ ಎಂದರು.

ಮಹಾರಾಷ್ಟ್ರ ಮಾದರಿಯಲ್ಲಿ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಲು ನಮ್ಮ ಸರ್ಕಾರ ಬದ್ಧವಾಗಿದ್ದು, ಇದಕ್ಕೆ ಬದಲು ಕೇಂದ್ರ ಸರ್ಕಾರವೇ ದೇಶಾದ್ಯಂತ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರುವುದು ಸೂಕ್ತ ಎಂದು ಅಭಿಪ್ರಾಯಪಟ್ಟ ಅವರು, ಕೇಂದ್ರ ಸರ್ಕಾರ ದತ್ತು ಸ್ವೀಕಾರ ನಿಯಮಗಳನ್ನು ಸರಳೀಕರಣ ಮಾಡಿದೆ. ಇದರಿಂದ ಸಾಕಷ್ಟು ಅನಾಥ ಮಕ್ಕಳಿಗೆ ಜೀವನ ಸಿಕ್ಕಂತಾಗುತ್ತಿದೆ ಎಂದು ಹೇಳಿದರು.

ಮಕ್ಕಳನ್ನು ಕಸದ ತೊಟ್ಟಿಗೆ ಎಸೆಯುವುದು, ಎಲ್ಲೆಂದರಲ್ಲಿ ಬಿಸಾಡುವುದನ್ನು ತಡೆಯಲು ನಮ್ಮ ಸರ್ಕಾರ ತೊಟ್ಟಿಲು ಯೋಜನೆ ಜಾರಿಗೆ ತಂದಿದೆ. ಮಕ್ಕಳನ್ನು ದತ್ತು ನೀಡುವ ಮೂಲಕ ಉತ್ತಮ ಜೀವನ ದೊರೆಯುವಂತೆ ಮಾಡಲಾಗುತ್ತದೆ. ಹೋಂ ಸ್ಟೇಗಳಲ್ಲಿ ಮಕ್ಕಳಿಗೆ ಜನಪದ ಅಕಾಡೆಮಿಯಿಂದ ಜಾನಪದ ಕಲೆಯ ಬಗ್ಗೆ, ಸಾಹಿತ್ಯದ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಅಪೌಷ್ಠಿಕತೆ ಕಳೆದ ವರ್ಷದಿಂದ ಈ ವರ್ಷ ಕಡಿಮೆಯಾಗಿದೆ. ಇದಕ್ಕೂ ಮೊದಲು ರಾಜ್ಯದಲ್ಲಿ ಶೇ.2.84ರಷ್ಟು ಅಪೌಷ್ಠಕತೆ ಇದ್ದು ಸರ್ಕಾರ ಹಾಲು ಮತ್ತು ಮೊಟ್ಟೆ ನೀಡುವ ಮೂಲಕ ಅದನ್ನು 0.46ಕ್ಕೆ ಇಳಿಸಿದೆ ಎಂದು ಹೇಳಿದರು.

Courtesy: eesanje

Comments