ರಾಜ್ಯ ಗುಪ್ತಚರ ಇಲಾಖೆ ವೈಫಲ್ಯ : ದೇವೇಗೌಡರ ಅಸಮಾಧಾನ

06 Sep 2017 5:28 PM | General
978 Report

ಬೆಂಗಳೂರು : ಗುಪ್ತಚರ ಇಲಾಖೆ ವೈಫಲ್ಯದಿಂದ ಇಂತಹ ದುರ್ಘಟನೆ ನಡೆದಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ಹಿರಿಯ ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರು ತಮಗೆ ಜೀವಬೆದರಿಕೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದರು. ಇದರ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ.

ಆದರೆ ಸರ್ಕಾರ ಎಚ್ಚೆತ್ತುಕೊಂಡಿರಲಿಲ್ಲ ಎಂದು ಹೇಳಿದರು. ಸರ್ಕಾರವು ಹಂತಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು. ಮುಂದೆ ಇಂತಹ ಕೃತ್ಯಗಳು ನಡೆಯದಂತೆ ಎಚ್ಚರ ವಹಿಸಬೇಕು. ಭಗವಾನ್ ಸೇರಿದಂತೆ ಕೆಲವು ಸಾಹಿತಿಗಳಿಗೆ ಸರ್ಕಾರ ಈಗ ಭದ್ರತೆ ನೀಡಲು ಮುಂದಾಗಿದೆ. ಇದಕ್ಕಿಂತ ಮುನ್ನ ಸರ್ಕಾರಕ್ಕೆ ಗೌರಿ ಲಂಕೇಶ್ ಕಾಣಿಸಲಿಲ್ಲವೇ ಎಂದು ಚಾಟಿ ಬೀಸಿದರು.

ಪ್ರಕರಣ ಸಿಬಿಐಗೆ ವಹಿಸುವ ಅಗತ್ಯವಿಲ್ಲ. ಏಕೆಂದರೆ ಈಗಾಗಲೇ ಸಿಸಿ ಟಿವಿ, ಅಪರಾಧಿಗಳ ಸುಳಿವು ಸಿಕ್ಕಿದೆ ಎಂಬ ಮಾಹಿತಿ ಇದೆ ಎಂದರು. ರಾಜ್ಯದಲ್ಲಿ ಇನ್ನು ಮುಂದೆ ಇಂತಹ ಕೊಲೆಗಳಾಗಬಾರದು. ಗುಪ್ತದಳ ಇಲಾಖೆ ಇನ್ನಷ್ಟು ಹೈಅಲರ್ಟ್ ಆಗಿ ಈ ವಿಷಯಗಳ ಬಗ್ಗೆ ಗಮನ ನೀಡಬೇಕು. ಗುಪ್ತಚರ ಇಲಾಖೆ ವೈಫಲ್ಯದಿಂದಾಗಿ ಇಂತಹ ಹತ್ಯೆಗಳು ಮರುಕಳಿಸುತ್ತಿವೆ ಎಂದು ಹೇಳಿದರು.

Courtesy: eesanje

Comments