ರಣರಂಗವಾದ ಫ್ರೀಡಂಪಾರ್ಕ್ : ವಾಗ್ವಾದ, ಘರ್ಷಣೆ, ಲಾಠಿ ಪ್ರಹಾರ

05 Sep 2017 3:18 PM | General
344 Report

ಕಳೆದ ಒಂದು ವಾರದಿಂದ ಜಿಟಿಜಿಟಿ ಮಳೆಗೆ ಸಿಲುಕಿದ್ದ ಉದ್ಯಾನನಗರ ಬೆಂಗಳೂರು ಇಂದು ಅಕ್ಷರಶಃ ಅಗ್ನಿಕುಂಡವಾಗಿತ್ತು. ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಇಂದು ಹಮ್ಮಿಕೊಂಡಿದ್ದ ಮಂಗಳೂರು ಚಲೋ ಬೈಕ್ ರ್ಯಾಲಿಗೆ ಪೊಲೀಸರು ಅನುಮತಿ ನೀಡದ ಕಾರಣ ಯುವ ಮೋರ್ಚಾ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಫ್ರೀಡಂಪಾರ್ಕ್ ಬಳಿ ಭಾರೀ ಸಂಘರ್ಷವೇ ನಡೆಯಿತು.

ಬೈಕ್ ರ್ಯಾಲಿಗೆ ಅನುಮತಿ ನೀಡಬೇಕೆಂದು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪಟ್ಟು ಹಿಡಿದರೆ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರಿ ಸಮಸ್ಯೆ ಮುಂದಿಟ್ಟುಕೊಂಡು ಪೊಲೀಸರು ಅನುಮತಿ ನೀಡಲಿಲ್ಲ. ಇದರಿಂದ ಕೆರಳಿದ ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾದಕ್ಕಿಳಿದರು.  ಪರಿಸ್ಥಿತಿ ನಿಭಾಯಿಸಲು ಬಿಜೆಪಿಯ ಕೆಲ ಮುಖಂಡರನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಯಿತು. ಸರ್ಕಾರದ ಈ ಕ್ರಮಕ್ಕೆ ಯುವ ಮೋರ್ಚಾ ಕಾರ್ಯಕರ್ತರು ದಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗ್ಗೆ 10.30ಕ್ಕೆ ಸರಿಯಾಗಿ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ , ಮುಖಂಡರಾದ ಅಶೋಕ್, ಶೋಭಾ ಕರಂದ್ಲಾಜೆ ಮತ್ತಿತರರು ಚಾಲನೆ ನೀಡಬೇಕಿತ್ತು. ಆದರೆ ಬೆಳಗ್ಗೆ 6 ಗಂಟೆಯಿಂದಲೇ ಒಂದು ಕಿ.ಮೀ ಸುತ್ತಮುತ್ತ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು.  ಆದರೂ ಶಾಸಕರಾದ ಆರ್.ಅಶೋಕ್, ವೈ.ಎ.ನಾರಾಯಣಸ್ವಾಮಿ , ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ , ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯನಾಯ್ಡು , ವಿ.ಸೋಮಣ್ಣ , ವಿಧಾನಪರಿಷತ್ ಸದಸ್ಯ ಪುಟ್ಟಸ್ವಾಮಿ ಸೇರಿದಂತೆ ಮತ್ತಿತರ ಮುಖಂಡರು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಿಂದ ಕಾರ್ಯಕರ್ತರ ಜೊತೆ ಫ್ರೀಡಂಪಾರ್ಕ್‍ನತ್ತ ಧಾವಿಸಲು ಮುಂದಾದರು.

Courtesy: eesanje

Comments