ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ತಜ್ಞರಿಂದ ಸರಕಾರಕ್ಕೆ 21 ಶಿಫಾರಸ್ಸು

05 Sep 2017 10:21 AM | General
388 Report

ಬೆಂಗಳೂರು : ರಾಜ್ಯದ ಶಾಲೆಗಳನ್ನು ಸದೃಢಗೊಳಿಸಿ ಗುಣಮಟ್ಟದ ಶಿಕ್ಷಣ ನೀಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಸಿದ್ದರಾಮಯ್ಯ ಅವರ ಅಧ್ಯಕ್ಷತೆಯ 'ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿ' ಮುಖ್ಯಮಂತ್ರಿಯವರಿಗೆ ಇಂದು ತನ್ನ ಅಧ್ಯಯನ ವರದಿ ಸಲ್ಲಿಸಿತು.

ಶಿಕ್ಷಣ ತಜ್ಞರು, ಸಾಹಿತಿಗಳಾದ ಚಂದ್ರಶೇಖರ ದಾಮ್ಲೆ, ಪ.ಮಲ್ಲೇಶ್, ಗಂಗಾಧರ ಕುಷ್ಟಗಿ, ಭಾನು ಮುಷ್ತಾಕ್, ಪಾ. ಅಂಬ್ರೋಸ್ ಪಿಂಟೋ ಈ ಸಮಿತಿಯ ಸದಸ್ಯರಾಗಿದ್ದರು. ವರದಿ ಸಲ್ಲಿಕೆ ವೇಳೆ ಹಿರಿಯ ಸಾಹಿತಿ ಚಂದ್ರಶೇಖರ್ ಪಾಟೀಲ್ ಹಾಜರಿದ್ದರು. ವರದಿಯಲ್ಲಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಮಿತಿಯು 21 ಶಿಫಾರಸ್ಸುಗಳನ್ನು ಮಾಡಿದೆ.

ವರದಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿಗಳು, ವರದಿಯನ್ನು ಪೂರ್ಣವಾಗಿ ಪರಿಶೀಲಿಸಲಾಗುವುದು. ಕನ್ನಡದ ಬಗ್ಗೆ ಯಾವುದೇ ಸಲಹೆ ಬಂದರೂ ಬಂದರೂ ನಿರ್ಲಕ್ಷಿಸುವ ಪ್ರಶ್ನೆಯೇ ಇಲ್ಲ," ಎಂದು ಹೇಳಿದರು. "ಸರ್ಕಾರಿ ಶಾಲೆಗಳಿಗೆ ಹೋಗುವವರು ತಳ ಸಮುದಾಯದ ಜನ. ಅವರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಒಂದೊಮ್ಮೆ ಸಮಾನ ಶಿಕ್ಷಣ ಸಿಗದಿದ್ದರೆ ಆರ್ಥಿಕ, ಸಾಮಾಜಿಕ ಅಸಮಾನತೆ ಇನ್ನೂ ದೊಡ್ಡದಾಗುತ್ತದೆ. ಪ್ರಾಥಮಿಕ ಶಿಕ್ಷಣಕ್ಕೆ 18 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದೇವೆ. ಆದರೂ ಅಗತ್ಯಕ್ಕೆ ತಕ್ಕಂತೆ ಸೌಕರ್ಯ ಒದಗಿಸಲು ಆಗಿಲ್ಲ," ಎಂದು ಹೇಳಿದರು.

"ಶಾಸಕರು, ಇತರರು ಸರ್ಕಾರಿ ಶಾಲೆಗಳ ಬಗ್ಗೆ ಮಾತಾಡ್ತಾರೆ. ಆದರೆ ಅವರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಾರೆ. ಎಲ್ಲರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು," ಎಂದು ಮುಖ್ಯಮಂತ್ರಿಗಳು ಹೇಳಿದರು. ಇನ್ನು, "ಸಮಿತಿ ವರದಿ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು. ಜತೆಗೆಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಿಸಿ ನೀಡಿರುವ ವರದಿ ಸಹ ಸರ್ಕಾರದ ಮುಂದೆ ಇದೆ. ಅದನ್ನು ಕಸದ ಬುಟ್ಟಿಗೇನೂ ಹಾಕಿಲ್ಲ. ಆ ವರದಿಯ ಅನುಷ್ಠಾನಕ್ಕೂ ಕ್ರಮ ವಹಿಸಲಾಗುವುದು," ಎಂದು ಮುಖ್ಯಮಂತ್ರಿಗಳು ಹೇಳಿದರು.

"ಸರ್ಕಾರದ ಬಹುತೇಕ ಐಎಎಸ್‌ ಅಧಿಕಾರಿಗಳು ಕಡತಗಳಲ್ಲಿ ಕನ್ನಡ ಬಳಸುತ್ತಿದ್ದಾರೆ. ಕನ್ನಡ ಬಳಸದವರ ವಿರುದ್ಧ ಕ್ರಮ ಜರುಗಿಸಲು, ಅಂತಹ ಕಡತಗಳನ್ನು ವಾಪಸ್ ಕಳುಹಿಸಲು ಸಚಿವರಿಗೂ ಸೂಚನೆ ನೀಡಿದ್ದೇನೆ," ಎಂದು ಹೇಳಿದರು.

"ಗುಣಮಟ್ಟದ ಶಿಕ್ಷಣಕ್ಕಾಗಿ ಹೋಬಳಿಗೊಂದು ವಸತಿ ಶಾಲೆಯನ್ನು ಸರ್ಕಾರ ತೆರೆಯುತ್ತಿದೆ. ಪ್ರಾಥಮಿಕ ಶಾಲೆಗಳಿಗೆ ಹತ್ತು ಸಾವಿರ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ," ಎಂದು ಮುಖ್ಯಮಂತ್ರಿಗಳು ಹೇಳಿದರು. ವರದಿಯಲ್ಲಿರುವ ಪ್ರಮುಖ ಶಿಫಾರಸುಗಳನ್ನು ಜಾರಿಗೆ ತರಲೇಬೇಕು. ಈ ಬಗ್ಗೆ ಗಮನ ಹರಿಸಿ ಎಂದು ಮುಖ್ಯಮಂತ್ರಿಗಳು ಶಿಕ್ಷಣ ಸಚಿವರಿಗೆ ಇದೇ ಸಂದರ್ಭದಲ್ಲಿ ಸೂಚಿಸಿದರು.

 

Courtesy: oneindia kannada

Comments