ಡಿಕೆಶಿ ಮುಖ್ಯಮಂತ್ರಿ ಆದರೂ ಪರವಾಗಿಲ್ಲ ಎಂದ ಎಚ್.ಡಿ.ದೇವೇಗೌಡರು

02 Sep 2017 4:47 PM | General
4960 Report

ಬೆಂಗಳೂರು : ಡಿ.ಕೆ.ಶಿವಕುಮಾರೋ, ಅಶೋಕೋ ಅಥವಾ ಕುಮಾರಸ್ವಾಮಿಯೋ ಯಾರಾದರೂ ಮುಖ್ಯಮಂತ್ರಿ ಆಗಲಿ. ಅಷ್ಟು ಸುಲಭಕ್ಕೆ ಮುಖ್ಯಮಂತ್ರಿ ಅಗಲು ಬಿಡ್ತಾರೆ ಅಂದುಕೊಂಡಿದ್ದೀರಾ? ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಚ್ಚರಿ ಮೂಡಿಸಿದ್ದಾರೆ.

ಇಲ್ಲಿನ ಕುವೆಂಪು ಕಲಾಕ್ಷೇತ್ರದಲ್ಲಿ ಶನಿವಾರ ಕೃಷಿಕ್ ಸರ್ವೋದಯ ಫೌಂಡೇಷನ್ ನ ಬೆಳ್ಳಿಹಬ್ಬ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು (ಒಕ್ಕಲಿಗರು) ಎರಡನೇ ದರ್ಜೆಯಲ್ಲಿದ್ದೇವೆ, ಪ್ರಥಮ ದರ್ಜೆಯವರಾಗಬೇಕು. ರಾಜಕೀಯ ಜೀವನದ ಆರಂಭದಿಂದಲೂ ನನ್ನನ್ನು ಒಕ್ಕಲಿಗರ ಪರ ಹಾಗೂ ಉಳಿದ ಸಮುದಾಯದ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಎಂದರು.

ಕಾವೇರಿ ನದಿ ಪ್ರದೇಶದ ಎರಡೂವರೆ ಕೋಟಿ ಮಂದಿಯ ಸಲುವಾಗಿ ನದಿ ಸಮಸ್ಯೆಯನ್ನು ನಾವು ಬಗೆಹರಿಸಬೇಕಾಗಿದೆ. ನಮ್ಮಿಂದ ಆಗುತ್ತದೋ ಇಲ್ಲವೋ ಪ್ರಯತ್ನವಂತೂ ಮಾಡಲೇ ಬೇಕಾಗಿದೆ ಎಂದು ದೇವೇಗೌಡರು ಹೇಳಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ದೇವೇಗೌಡರು ಬಹಳ ಕಷ್ಟಪಟ್ಟು ಉನ್ನತ ಸ್ಥಾನಕ್ಕೆ ಏರಿದ್ದಾರೆ. ಅವರಿಗೂ ಎಷೋ ಮಂದಿ ಅಡೆತಡೆ ಮಾಡಿದ್ದಾರೆ. ನನಗೂ ಸುಮಾರು ಏಟು ಕೊಟ್ಟಿದ್ದಾರೆ. ಅದರಿಂದ ಸುಧಾರಿಸಲು ತಿಂಗಳುಗಳೇ ಬೇಕಾಗಬಹುದು.

ಅವೆಲ್ಲದರಿಂದ ಹೊರಬಂದು ಇಲ್ಲಿ ನಿಂತು ಮಾತನಾಡುತ್ತಿದ್ದೇನೆ ಎಂದು ಹೇಳಿದರು. ಯಾರ್ಯಾರು ಏನು ಏಟು ಕೊಟ್ಟಿದ್ದಾರೆ ಎಂಬುದು ಗೊತ್ತಿದೆ. ಆದರೆ ನನ್ನ ಕಷ್ಟಕ್ಕೆ ಮಠವೂ ಭಾಗಿಯಾಗಿದೆ. ನಮ್ಮ ಮೇಲೆ ನಿರ್ಮಲಾನಂದ ನಾಥ ಸ್ವಾಮೀಜಿ ಆಶೀರ್ವಾದ ಇರಲಿ, ದೇವೇಗೌಡರ ಆಶೀರ್ವಾದವೂ ಇರಲಿ ಎಂದು ಶಿವಕುಮಾರ್ ಹೇಳಿದರು. ಇನ್ನು ಶಿವಕುಮಾರ್ ಅವರು ದೇವೇಗೌಡರಿಗೆ ಶಾಲು ಹೊದಿಸಿ, ಹಾರ ಹಾಕಿ, ನಮಸ್ಕರಿಸಿದರು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಉಪಸ್ಥಿತರಿದ್ದರು.

Courtesy: oneindia kannada

Comments