ಡೊಕ್ಲಾಮ್ ವಿವಾದವನ್ನು ಎನ್‌ಎಸ್‌ಎ ಅಜಿತ್ ದೋವಲ್ ಟೀಂ ನಿರ್ವಹಿಸಿದ್ದು ಹೇಗೆ ಗೊತ್ತಾ?
ಡೊಕ್ಲಾಮ್ ನಿಂದ ತನ್ನ ಸೇನಾ ಪಡೆಯನ್ನು ಚೀನಾ ವಾಪಸ್ ಕರೆಸಿಕೊಂಡಿದೆ. ಡೊಕ್ಲಾಮ್ ವಿಷಯದಲ್ಲಿ ಪಟ್ಟು ಬಿಡದೇ, ಮಾತೆತ್ತಿದರೆ ಯುದ್ಧೋನ್ಮಾದದಲ್ಲಿ ಮಾತನಾಡುತ್ತಿದ್ದ ಚೀನಾ ಏಕಾಏಕಿ ತನ್ನ ನಿಲುವು ಬದಲಿಸಿಕೊಂಡು ಸೇನಾ ಪಡೆಯನ್ನು ವಾಪಸ್ ಕರೆಸಿಕೊಳ್ಳುವುದರ ಹಿಂದಿನ ಕಾರಣ ಹುಡುಕಿ ಹೊರಟರೆ ಉತ್ತರ ಸಿಗುವುದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ತಂಡದ ಕಾರ್ಯತಂತ್ರದಲ್ಲಿ.
ಚೀನಾದಂತೆಯೇ ಭಾರತವೂ ಸಹ ಡೋಕ್ಲಾಮ್ ವಿಷಯದಲ್ಲಿ ಪಟ್ಟು ಬಿಡದೇ ಚೀನಾವನ್ನು ಎದುರಿಸಿತ್ತು, ಮತ್ತೊಂದೆಡೆ ರಾಜತಾಂತ್ರಿಕವಾಗಿಯೂ ಸಹ ಚೀನಾವನ್ನು ಎದುರಿಸಿದ್ದ ಅಜಿತ್ ದೋವಲ್ ಹಾಗೂ ತಂಡ ಡೊಕ್ಲಾಮ್ ವಿವಾದವನ್ನು ಸಧ್ಯಕ್ಕೆ ತಣ್ಣಗಾಗಿಸುವಲ್ಲಿ ಯಶಸ್ವಿಯಾಗಿದೆ.ವಿವಾದ ಉಂಟಾದ ನಂತರ ಮೊದಲ ಬಾರಿಗೆ ಜು.27 ರಂದು ನಡೆದ ಭಾರತ-ಚೀನಾ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಲ್ಲಿ ಅದು ನಿಮ್ಮ ಪ್ರದೇಶವೇ ಎಂದು ಚೀನಾ ರಾಷ್ಟ್ರೀಯ ಭದ್ರತಾ ಸಲಹೆಗಾರರು ಅಜಿತ್ ದೋವಲ್ ಅವರನ್ನು ಪ್ರಶ್ನಿಸಿದ್ದರು. ಅದಕ್ಕೆ ಶಾಂತವಾಗಿಯೇ ಪ್ರತಿಕ್ರಿಯೆ ನೀಡಿದ್ದ ಅಜಿತ್ ದೋವಲ್, ಎಲ್ಲಾ ವಿವಾದಿತ ಪ್ರದೇಶಗಳೂ ಪೂರ್ವನಿಯೋಜಿತವಾಗಿಯೇ ಚೀನಾದ್ದಾಗಿಬಿಡುತ್ತದಾ? ಎಂದು ಪ್ರತಿ ಪ್ರಶ್ನೆ ಹಾಕಿದ್ದಾರೆ.
ಅಷ್ಟೇ ಅಲ್ಲದೇ ಭೂತಾನ್ ನ ಪ್ರದೇಶದೊಳಗೆ ರಸ್ತೆ ನಿರ್ಮಿಸುವ ಮೂಲಕ ಮೂರು ರಾಷ್ಟ್ರಗಳಿಗೆ ಸೇರಿದ ಪ್ರದೇಶದಲ್ಲಿದ್ದ ಯಥಾಸ್ಥಿತಿಯನ್ನು ಚೀನಾ ಬದಲಾವಣೆ ಮಾಡಿದೆ ಎಂದು ಆಕ್ಷೇಪಿಸಿದ್ದ ಅಜಿತ್ ದೋವಲ್, ಭೂತಾನ್ ನ ಭದ್ರತೆಯ ಆತಂಕವನ್ನು ಗಮನಿಸಲು ಭಾರತಕ್ಕೆ ಅವಕಾಶ ಇರುವ ಒಪ್ಪಂದವನ್ನೂ ಚೀನಾಗೆ ನೆನಪಿಸಿದ್ದಾರೆ. ಈ ವೇಳೆ ಚೀನಾ ಡೋಕ್ಲಾಮ್ ನ ಬದಲಾಗಿ ಭೂತಾನ್ ನ ಉತ್ತರ ಭಾಗದಲ್ಲಿರುವ ಪ್ರದೇಶದಲ್ಲೇ 500 ಚದರ ಕಿಮೀ ನಷ್ಟು ಪ್ರದೇಶವನ್ನು ನೀಡುವ ಆಫರ್ ಮುಂದಿಟ್ಟಿತ್ತು ಎಂದೂ ಹೇಳಲಾಗಿದೆ. ಆದರೆ ಚೀನಾದ ಯಾವುದೇ ಆಮಿಷ, ಬೆದರಿಕೆಗೂ ಒಳಗಾಗದ ಭಾರತದ ಎನ್‌ಎಸ್‌ಎ ಅಜಿತ್ ದೋವಲ್ ತಂಡ ಡೊಕ್ಲಾಮ್ ನಿಂದ ಚಿನಾ ಪಡೆಗಳು ಹಿಂದೆ ಸರಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.




Comments