ವಿದ್ಯುತ್‌ ಸ್ವಾವಲಂಬಿಯಾಗಲಿವೆ 155 ಸರಕಾರಿ ಕಚೇರಿಗಳು

18 Aug 2017 2:36 PM | General
431 Report

ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳ 155 ಸರಕಾರಿ ಕಚೇರಿಗಳಿನ್ನು ವಿದ್ಯುತ್‌ ಸ್ವಾವಲಂಬಿಯಾಗಲಿವೆ! ಹೌದು. ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟ ವಿಭಾಗ ಒಳಗೊಂಡಿರುವ ಬೆಳಗಾವಿ ಹೆಸ್ಕಾಂ ವಲಯದ 155 ಸರಕಾರಿ ಕಚೇರಿ ಕಟ್ಟಡಗಳ ಮೇಲೆ ಸೋಲಾರ್‌ ಪ್ಯಾನಲ್‌ ಅಳವಡಿಕೆಗೆ ಚಾಲನೆ ನೀಡಲಾಗಿದೆ.

ರಾಜ್ಯಕ್ಕೆ ಸೋಲಾರ್‌ ವ್ಯವಸ್ಥೆ ಕಾಲಿಟ್ಟು ವರ್ಷಗಳೇ ಕಳೆದಿವೆ. ಕೆಲವು ಖಾಸಗಿ ಕಟ್ಟಡಗಳು, ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು ಸೋಲಾರ್‌ ಅಳವಡಿಸಿಕೊಳ್ಳುವ ಮೂಲಕ ಮಾದರಿ ಎನಿಸಿಕೊಂಡಿದ್ದರೂ ಸರಕಾರಿ ಕಚೇರಿಗಳು ಮಾತ್ರ ಇಂದಿಗೂ ಬ್ರಿಟಿಷ್‌ ವ್ಯವಸ್ಥೆಯಲ್ಲೇ ಮುಂದುವರಿದಿವೆ. ಸರಕಾರಿ ಕಚೇರಿಗಳಲ್ಲಿನ ವಿದ್ಯುತ್‌ ವ್ಯವಸ್ಥೆ ಬದಲಾವಣೆಗೆ ವರ್ಷಗಳ ಹಿಂದೆಯೇ ಸರಕಾರದ ಮಟ್ಟದಲ್ಲಿ ಚರ್ಚೆ ಆರಂಭಗೊಂಡಿದ್ದರೂ ಅನುಷ್ಠಾನಕ್ಕೆ ಬಂದಿರಲಿಲ್ಲ. ಕೊನೆಗೂ ಎಚ್ಚೆತ್ತುಕೊಂಡ ಇಲಾಖೆ ಬೆಳಗಾವಿ ವಲಯದಲ್ಲಿ ಮೊದಲ ಹಂತದಲ್ಲಿ 155 ಕಚೇರಿಗಳನ್ನು ಸೋಲಾರ್‌ ಅಳವಡಿಕೆಗೆ ಆಯ್ಕೆ ಮಾಡಿಕೊಂಡು ಪ್ರತಿ ಕಿಲೋ ವ್ಯಾಟ್‌ ಸಾಮರ್ಥ್ಯ‌ದ ಸೋಲಾರ್‌ ಪ್ಯಾನಲ್‌ ಅಳವಡಿಕೆಗೆ 1 ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ.

ಬೆಳಗಾವಿ ವಿಭಾಗದಲ್ಲಿ 45, ವಿಜಯಪುರ 43, ಬಾಗಲಕೋಟ 49 ಮತ್ತು ಚಿಕ್ಕೋಡಿ ವಿಭಾಗದಲ್ಲಿನ 18 ಕಚೇರಿ ಸೇರಿದಂತೆ ಒಟ್ಟು 155 ಸರಕಾರಿ ಕಚೇರಿಗಳ ಮೇಲೆ ಸೋಲಾರ್‌ ಪ್ಯಾನಲ್‌ ಅಳವಡಿಕೆಗೆ ಈ ವರ್ಷದ ಮಾರ್ಚ್‌ನಲ್ಲಿ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಆ ಪೈಕಿ ಬೆಳಗಾವಿಯ 4, ವಿಜಯಪುರದ 2, ಬಾಗಲಕೋಟೆಯ 3 ಮತ್ತು ಚಿಕ್ಕೋಡಿ ವಿಭಾಗದ 2 ಕಚೇರಿ ಕಟ್ಟಡಗಳ ಮೇಲೆ ಸೋಲಾರ್‌ ಪ್ಯಾನಲ್‌ ಅಳವಡಿಕೆ ಪೂರ್ಣಗೊಂಡಿದೆ. ಇನ್ನುಳಿದ ಎಲ್ಲ ಸೋಲಾರ್‌ ಸ್ಥಾವರಗಳನ್ನು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಟೆಂಡರ್‌ನಲ್ಲಿ ಶರತ್ತು ಹಾಕಲಾಗಿದೆ.

Courtesy: vijaya karnataka

Comments