ಮೆಟ್ರೋ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರು

28 Jun 2017 12:21 PM | General
529 Report

ಬೆಂಗಳೂರು : ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಇರುವ ಮೆಟ್ರೋ ರೈಲು ನಿಲ್ದಾಣ, ವಿಭಜಿತ ಬೆಂಗಳೂರು ವಿಶ್ವ ವಿದ್ಯಾನಿಲಯವೊಂದಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ವಿಧಾನಸೌಧದಲ್ಲಿ ಆಯೋಜಿಸಿದ್ದ ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡ ಜಯಂತಿಸಮಾರಂಭದಲ್ಲಿ ಮಾತನಾಡಿದ ಅವರು, ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ದೊಡ್ಡ ಪ್ರತಿಮೆ ನಿರ್ಮಾಣ ಮಾಡಲಾಗುವುದು. ಕೆಂಪೇಗೌಡರ ಸಂಕ್ಷಿಪ್ತ ಪರಿಚಯವೂ ಕೂಡ ಅಲ್ಲಿ ದೊರೆಯುವಂತೆ ಮಾಡಲಾಗುವುದು ಎಂದು ಹೇಳಿದರು.

ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಇರುವ ಬೃಹತ್ ಮೆಟ್ರೋ ರೈಲು ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ನಾಮಕರಣ ಮಾಡಲಾಗುವುದು. ಅದೇ ರೀತಿ ಬೆಂಗಳೂರು ವಿವಿಯನ್ನು ಮೂರು ವಿವಿಗಳಾಗಿ ವಿಂಗಡಿಸಲಾಗಿದ್ದು, ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ಸೂಕ್ತವಾದ ಒಂದು ವಿವಿಗೆ ಕೆಂಪೇಗೌಡರ ಹೆಸರಿಡಲು ತಮ್ಮದೇನೂ ತಕರಾರು ಇಲ್ಲ ಎಂದು ಹೇಳಿದರು. ಜನರ ಪ್ರೀತಿ ವಿಶ್ವಾಸ ಗಳಿಸಿದಾಗ ನಾಡಪ್ರಭು ಆಗಲು ಸಾಧ್ಯ. ಅಂತಹ ಆಡಳಿತವನ್ನು ಕೆಂಪೇಗೌಡರು ನೀಡಿದ್ದರು. ಅವರ ಆಶಯದಂತೆ ಜನಪ್ರಿಯ ಮತ್ತು ಪಾರದರ್ಶಕ ಆಡಳಿತ ನಡೆಸಲಾಗುತ್ತದೆ ಎಂದು ಸಮರ್ಥಿಸಿಕೊಂಡರು.

ಶಿಕ್ಷಣ , ಆರೋಗ್ಯ, ಔದ್ಯಮಿಕ ಕ್ಷೇತ್ರದಲ್ಲಿ ಬೆಂಗಳೂರು ವಿಶ್ವವಿಖ್ಯಾತವಾಗಲು ಇಲ್ಲಿನ ಹವಾಮಾನ ಕಾರಣ. ಜಗತ್ತಿನ ಯಾವುದೇ ಭಾಗದಲ್ಲೂ ಕೂಡ ಇಂತಹ ವಾತಾವರಣ ಇಲ್ಲ. ಅದನ್ನು ನೋಡಿಯೇ ಕೆಂಪೇಗೌಡರು ಬೆಂಗಳೂರು ನಿರ್ಮಿಸಿದ್ದರು. ಇದೀಗ ಜಗತ್ತಿನ ಅತ್ಯಂತ ಕ್ರಿಯಾಶೀಲ ನಗರವಾಗಿ ಬೆಳೆಯುತ್ತಿದೆ ಎಂದರು. ಕೆಂಪೇಗೌಡರು ನಿರ್ಮಿಸಿದ ನಾಲ್ಕು ಗಡಿ ಗೋಪುರಗಳನ್ನು ದಾಟಿ 800ಚ.ಕಿ.ಮೀ ವ್ಯಾಪ್ತಿಯೊಳಗೆ ಬೆಂಗಳೂರು ಬೆಳೆದಿದೆ ಎಂದರು.

ಇನ್ನು ಮುಂದೆ ಪ್ರತಿ ವರ್ಷವೂ ಜೂ.27ರಂದು ರಾಜಧಾನಿ ಬೆಂಗಳೂರಿನಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ನಿರಂತರವಾಗಿ ಕೆಂಪೇಗೌಡ ಜಯಂತಿ ಆಚರಿಸಲಾಗುವುದು. ಇದನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ. ವಿಧಾನಸೌಧ ನಿರ್ಮಾಣವಾದಾಗಲೇ ಇದು ಆಗಬೇಕಿತ್ತು. ವಿಳಂಬವಾಗಿ ಆದರೂ ಆಗಿದೆ ಎಂದರು.  ವಿಶ್ವ ವಿಖ್ಯಾತ ಬೆಂಗಳೂರಿಗೆ ಭದ್ರ ಬುನಾದಿ ಹಾಕಿದ ಕೆಂಪೇಗೌಡರು ಯಾವುದೇ ಜಾತಿ- ಧರ್ಮಕ್ಕೆ ಸೇರದೆ ಜ್ಯಾತೀತ ಆಡಳಿತ ನಡೆಸಿದ್ದರು ಎಂದ ಅವರು, ಈ ವರ್ಷವೂ ಕೆಂಪೇಗೌಡರ ಜಯಂತಿ ಆಚರಿಸುವ ಮೂಲಕ ಕೆಂಪೇಗೌಡರ ಸ್ಮರಣೆ ಮಾಡಲಾಗುವುದು ಎಂದು ಹೇಳಿದರು.

 

Edited By

Shruthi G

Reported By

Shruthi G

Comments