'ದುರ್ಗದ ಹುಲಿ'ಯಾಗಲು ಸಜ್ಜಾಗಿದ್ದಾರೆ ಕಿಚ್ಚ ಸುದೀಪ್..!?

04 Oct 2018 12:04 PM | Entertainment
1499 Report

ಇತ್ತಿಚಿಗೆ ಸ್ಯಾಂಡಲ್ ವುಡ್ ಒಂದಲ್ಲ ಒಂದು ವಿಷಯಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಸ್ಟಾರ್ ವಾರ್ ಅಂತೆ ಅದಂತೆ ಇದಂತೆ ಎನ್ನುವ ವಿಚಾರಕ್ಕಂತೂ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ, ಇದೀಗ 'ದುರ್ಗದ ಹುಲಿ' ಎಂಬ  ಟೈಟಲ್‌ ಈಗಾಗಲೇ ರಿಜಿಸ್ಟರ್‌ ಆಗಿದೆ. ಅದೇ ಹೆಸರಲ್ಲಿ ಚಿತ್ರದುರ್ಗದ ಇತಿಹಾಸ ಹೇಳುವ ಕತೆಯನ್ನು ಸಿದ್ದ ಪಡಿಸಲಾಗುತ್ತಿದೆ,ಈ ಚಿತ್ರದ ನಾಯಕನ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳುವವರು ಕಿಚ್ಚ ಸುದೀಪ್‌. ಇಂಟರೆಸ್ಟಿಂಗ್‌ ಅಂದರೆ ಈ ಚಿತ್ರದ ನಿರ್ದೇಶನದ ಹೊಣೆಯನ್ನೂ ಕೂಡ ಸುದೀಪ್‌ ಹೊತ್ತುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸಿನಿಮಾ ಯೋಚನೆ ಶುರುವಾಗಿದ್ದು ಈಗಲ್ಲ... 'ವೀರ ಮದಕರಿ' ಚಿತ್ರದ ಸಮಯದಲ್ಲೇ ಈ ಚಿತ್ರಕ್ಕೆ ಕಿಚ್ಚ ಸುದೀಪ್  ಪ್ಲಾನ್‌ ಮಾಡಿಕೊಂಡಿದ್ರಂತೆ.. ಆ ಸಿನಿಮಾದ ಕೆಲಸಗಳನ್ನು ಕೆಲವು ತಿಂಗಳ ಹಿಂದಷ್ಟೇ ಸುದೀಪ್ ಶುರು ಮಾಡಿಕೊಂಡಿದ್ದಾರೆ. ಮೊದಲೆ ಪ್ಲಾನ್ ಮಾಡಿಕೊಂಡಿದ್ದ ಹಾಗೆ 2019ಕ್ಕೆ ಸಿನಿಮಾಗೆ ಚಾಲನೆ ಕೊಟ್ಟು 2020ರಲ್ಲಿ ಕೊನೆಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಬೇಕಾಗಿತ್ತು.  ಇದಲ್ಲೆದರ ನಡುವೆ ರಾಕ್‌ಲೈನ್‌ ನಿರ್ಮಾಣದಲ್ಲಿ, ರಾಜೇಂದ್ರಸಿಂಗ್‌ಬಾಬು ನಿರ್ದೇಶನದಲ್ಲಿ 'ಗಂಡುಗಲಿ ಮದಕರಿ ನಾಯಕ' ಸಿನಿಮಾವು ಕೂಡ ಸೆಟ್ಟೇರುತ್ತಿದೆ. ಈ ಚಿತ್ರಕ್ಕೆ ದರ್ಶನ್‌ ಅವರೇ ನಾಯಕ ಎಂಬುದನ್ನು ಈಗಾಗಲೇ ರಾಕ್‌ಲೈನ್‌ ವೆಂಕಟೇಶ್‌ ಅವರೇ ಸ್ಪಷ್ಟ ಪಡಿಸಿದ್ದಾರೆ. ಈಗ ಅದೇ ದುರ್ಗದ ಕೋಟೆಯ ಮದಕರಿ ನಾಯಕನ ಕತೆಯನ್ನು ಮುಂದಿಟ್ಟುಕೊಂಡು 'ದುರ್ಗದ ಹುಲಿ' ಮಾಡಲಿಕ್ಕೆ ಹೊರಟಿರುವ ಸುದೀಪ್‌ ಅವರಲ್ಲಿ 'ಗಂಡುಗಲಿ ಮದಕರಿ ನಾಯಕ' ಚಿತ್ರದ ಘೋಷಣೆಯಿಂದ ಗೊಂದಲ ಶುರುವಾಗಿದೆಯಂತೆ. ಹಾಗಾಗಿ ಈ ಸಿನಿಮಾದ ವಿಷಯವನ್ನು ಯಾವ ರೀತಿ ಬಗೆಹರಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಈ ವಿಷಯದ ಬಗ್ಗೆ ಸುದೀಪ್ ಈಗಾಗಲೇ ಪ್ರತಿಕ್ರಿಯೆ ನೀಡಿದ್ದು ಟ್ವಿಟ್ಟರ್ ಮೂಲಕ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.

" ವೀರ ಮದಕರಿ ನಾಯಕನ ಸಿನಿಮಾ ನಿರ್ಮಾಣದ ಕುರಿತಂತೆ ನನ್ನ ಕೆಲವು ಅಭಿಪ್ರಾಯಗಳು

ನಾನು ನನ್ನ ತಂಡ ಹಾಗೂ ಕೆಲವು ಲೇಖಕರ ಬಳಗವು ಈಗ್ಗೆ ಒಂದು–ಒಂದೂವರೆ ವರ್ಷದಿಂದ ‘ವೀರ ಮದಕರಿ ನಾಯಕ‘ ಸಿನಿಮಾ ನಿರ್ಮಾಣದ ದಿಸೆಯಲ್ಲಿ ಕೆಲಸ ಮಾಡುತ್ತಿದೇವೆ. ಈಗಾಗಲೇ ಒಂದಷ್ಟು ಸಂಶೋಧನೆ ಮತ್ತೂ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ.

ವೀರ ಮದಕರಿ ಸಿನಿಮಾ ಮಾಡುವ ನಮ್ಮ ಆಲೋಚನೆ ವರ್ಷಗಳ ಹಿಂದೆಯೇ ಹುಟ್ಟಿದಂತಹುದು. ಆದರೆ, ಈ ದಿಸೆಯಲ್ಲಿ ಕೆಲಸ ಮಾಡಲು ಒಂದಷ್ಟು ಸಮಯ ಬೇಕಾಯಿತು. ಹೀಗಾಗಿ ಈ ಸಿನೆಮಾ ನಿರ್ದೇಶನ ಕೂಡ ಮಾಡುವ ಸ್ಫೂರ್ತಿ ಚಿಗುರೊಡೆಸಿತ್ತು.

ಇತ್ತೀಚೆಗೆ ಇದೇ ಕಥೆಯ ಆಧಾರಿತ ಮತ್ತೊಂದು ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ ಎಂಬ ಸುದ್ದಿ ನನಗೆ ನಿಜಕ್ಕೂ ಆಶ್ಚರ್ಯ ಉಂಟು ಮಾಡಿತು. ಸಹಜವಾಗಿಯೇ ನನಗೆ ಇದರಲ್ಲಿ ಏನಿದೆ ಎಂಬ ಪ್ರಶ್ನೆ ಹುಟ್ಟು ಹಾಕಿತು. ಯಾರೇ ಆಗಲೀ, ಇತಿಹಾಸದ ವಿಷಯಗಳ ಮೇಲೆ ಸಿನಿಮಾ ನಿರ್ಮಿಸಲು ಅರ್ಹರಿದ್ದಾರೆ.

ಒಂದೇ ವಿಷಯ, ಒಬ್ಬನೇ ವ್ಯಕ್ತಿಯ ಮೇಲೆ ಈಗಾಗಲೇ ಒಂದಕ್ಕಿಂತ ಹೆಚ್ಚು ಸಿನಿಮಾಗಳು ತೆರೆಕಂಡ ಉದಾಹರಣೆಗಳಿವೆ. ನಾನೊಬ್ಬನೇ ಮದಕರಿ ನಾಯಕನ ಪಾತ್ರ ನಿರ್ವಹಿಸಬೇಕು ಎಂಬುದು ಎಷ್ಟು ಸರಿ? ಆತ ಕರ್ನಾಟಕದ ವೀರಪುತ್ರ. ಅವರ ಬಗ್ಗೆ ಸಿನೆಮಾ ಯಾರಾದರೂ ಮಾಡಬಹುದು.

ರಾಕ್‌ಲೈನ್‌ ವೆಂಕಟೇಶ್‌ ಅವರ ಸಿನಿಮಾ ಆಸಕ್ತಿ ಅದ್ವಿತೀಯವಾದದ್ದು. ಇದನ್ನೊಂದು ಅತ್ಯುತ್ತಮ ಚಿತ್ರವಾಗಿ ತೆರೆಯ ಮೇಲೆ ತರುತ್ತಾರೆ ಎಂಬುದಕ್ಕೆ ಅನುಮಾನವೇ ಇಲ್ಲ. ರಾಜೇಂದ್ರ ಸಿಂಗ್‌ ಬಾಬು ಅವರ ಅನುಭವ ಕೂಡಾ ಇದರಲ್ಲಿ ಸಮ್ಮಿಲನವಾಗಿದೆ.

ಆದರೆ, ನಾನು ಮತ್ತು ನನ್ನ ತಂಡವು ಮಾಡ ಹೊರಟಿರುವ ಚಿತ್ರಕ್ಕೆ ಇದು ಅಡ್ಡಿಯಾಗುವುದಿಲ್ಲ. ಇದು ನಮ್ಮ ಕನಸೂ ಕೂಡಾ. ಇದು ಬರೀ ನನ್ನೊಬ್ಬನ ಕನಸಲ್ಲ. ಇಡೀ ತಂಡದ ಕನಸನ್ನು ನಾನು ಭಗ್ನಗೊಳಿಸಲು ಇಚ್ಛಿಸುವುದಿಲ್ಲ. ಇದರ ಬದಲಿಗೆ ಮಾಡಿ ಮಡಿಯುವುದೇ ಮೇಲು. ನಾನೂ ಒಬ್ಬ ಮದಕರಿ!

ರಾಕ್‌ಲೈನ್‌ ಅವರ ತಂಡವನ್ನು ನಾನು ಇಂತಹ ಒಳ್ಳೆಯ ಕರ್ನಾಟಕದ ನೆಲದ ಕಥೆಯನ್ನು ಆಯ್ಕೆ ಮಾಡಿರುವುದಕ್ಕೆ ಅಭಿನಂದಿಸುತ್ತೇನೆ. ಅವರಿಗೆ ನನ್ನ ಶುಭಾಶಯಗಳು.

ಅದೇ ರೀತಿಯಾಗಿ ನನ್ನ ನಿರ್ಣಯವನ್ನು ನೀವೆಲ್ಲರೂ ಸಮ್ಮತಿಸುತ್ತೀರೆಂದು ನಂಬಿರುವೆ.

ನಿಮ್ಮವ,
ಕಿಚ್ಚ "

ಎಂದು ಪತ್ರದಲ್ಲಿ ಹೇಳಿದ್ದಾರೆ

Edited By

Manjula M

Reported By

Manjula M

Comments