ಯಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್

17 Feb 2018 1:10 PM | Entertainment
1876 Report

ಕೆಜಿಎಫ್ ಯಾವಾಗ ಬಿಡುಗಡೆ, ಏನು ಅದರ ಕತೆ, ಯಾರ ಕತೆ ಅದು, ಕೆಜಿಎಫ್ ಗೂ ಕಥೆಗೂ ಏನು ಸಂಬಂಧ? ಮೊದಲ ಬಾರಿಗೆ ನಿರ್ದೇಶಕ ಪ್ರಶಾಂತ್ ನೀಲ್ ಮಾತಾಡಿದ್ದಾರೆ. ಚಿತ್ರದ ಕಥೆ, ಚಿತ್ರ ಕಥೆ, ಸೆಟ್ ಎಲ್ಲವನ್ನೂ ನಿಭಾಯಿಸುತ್ತಾ ಅದು ತನ್ನ ಹೋಮ್ ಬ್ಯಾನರ್ ಸಿನಿಮಾವೇನೋ ಎಂಬಂತೆ ಆಸಕ್ತಿ ತೋರುತ್ತಿರುವ ಯಶ್ ಗುಣಗಾನ ಮಾಡಿದ್ದಾರೆ.

ಇದೊಂದು ಪೀರಿಯಾಡಿಕ್ ಸಿನಿಮಾ. 70 ಮತ್ತು 80 ದಶಕದೊಳಗಿನ ಕಥೆ. ಚಿತ್ರದ ಟೈಟಲ್ ಹಾಗೂ ಪೋಸ್ಟರ್ ನೋಡಿದವರೆಲ್ಲ 'ಇದೇನು ಕೆಜಿಎಫ್ ಅಂಡರ್ವರ್ಲ್ಡ್ ಜಗತ್ತಿನ ಸಿನಿಮಾನಾ,' ಅಂತ ಕೇಳಿದ್ದುಂಟು. ನನ್ನದೇ ಕಲ್ಪನೆಯಲ್ಲಿ ರೂಪು ತಾಳಿದ ಒಬ್ಬ ವ್ಯಕ್ತಿಯ ಕಥೆ ಇದು. ಪೋಸ್ಟರ್ ಹಾಗೂ ಟೀಸರ್ನಲ್ಲಿ ನೋಡಿದ ಹಾಗೆ ಅಂಡರ್ವರ್ಲ್ಡ್ ಛಾಯೆ ಕಥೆಯಲ್ಲಿದ್ದರೂ ಅದು ಕೆಜಿಎಫ್ ಗೆ ಸಂಬಂಧಿಸಿದ್ದಲ್ಲ. ಅಷ್ಟೇ ಅಲ್ಲ, ಚಿತ್ರದ ಕಥೆ ಯಾವುದೇ ಪ್ರದೇಶಕ್ಕೂ ಅನ್ವಯವಾಗುವಂಥದ್ದು ಅನ್ನೋದೇ ವಿಶೇಷ.

ಕಥೆಗೂ ಅದಕ್ಕೂ ಲಿಂಕ್ ಇದೆ. ಅದೇನು ಅನ್ನೋದು ಚಿತ್ರ ನೋಡಿದಾಗಲೇ ಗೊತ್ತಾಗುತ್ತೆ. ಅಷ್ಟು ಮಾತ್ರ ಹೇಳಬಹುದು. ಇದೊಂದು ಕ್ಲಾಸ್ ಮತ್ತು ಮಾಸ್ ಸಿನಿಮಾ. ಎರಡು ವರ್ಗಕ್ಕೂ ಇಷ್ಟವಾಗುವ ಎಲ್ಲ ಅಂಶಗಳು ಚಿತ್ರದಲ್ಲಿವೆ. ಆಯಕ್ಷನ್, ರೊಮಾನ್ಸ್ ಜತೆಗೆ ತಾಯಿ-ಮಗನ ಸೆಂಟಿಮೆಂಟ್ ಈ ಚಿತ್ರದ ಹೈಲೈಟ್. ಒಂದು ಕಮರ್ಷಿಯಲ್ ಸಿನಿಮಾ ಅಂದಾಗ ಇರಬೇಕಾದ ಎಲ್ಲಾ ಅಂಶಗಳೂ ಇಲ್ಲಿವೆ. ಹಾಗಂತ ಯಾವುದನ್ನೂ ವೈಭವೀಕರಿಸಿಲ್ಲ. ಯಾವುದರ ಛಾಯೆಯೂ ಇಲ್ಲ. ಎಲ್ಲೂ ಕಾಣದ ಒಂದು ಪಾತ್ರವನ್ನು ನೀವು ಹೇಗೆ ನೋಡಲು ಸಾಧ್ಯವೋ ಹಾಗೆಯೇ ನವೀನವಾದದ್ದು ಮತ್ತು ಅಷ್ಟೇ ವಿಭಿನ್ನ ಎನಿಸುವ ಹಲವು ಸಂಗತಿಗಳು ಇಲ್ಲಿವೆ.ಮೊದಲು ಕಥೆ. ಅದೊಂದು ಯೂನಿವರ್ಸಲ್ ಸಬ್ಜೆಕ್ಟ್. ಅದರ ಜತೆಗೆ ಮೇಕಿಂಗ್ ಶೈಲಿ. ಈವರೆಗಿನ ಮೇಕಿಂಗ್ ನೋಡಿದ್ರೆ ಹಾಲಿವುಡ್ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ ಅನ್ನೋ ಮಾತು ಚಿತ್ರ ತಂಡದಿಂದ ಕೇಳಿ ಬಂದಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಆ ಮಟ್ಟಿಗೆ ದೊಡ್ಡ ಮಟ್ಟದ ಬಂಡವಾಳ ಹಾಕಿದ್ದಾರೆ. ಇನ್ನೂ ಶೂಟಿಂಗ್ ಬಾಕಿಯಿದೆ. ಅದನ್ನು ಅಷ್ಟೇ ಅದ್ಧೂರಿಯಾಗಿ ತೆರೆಗೆ ತರಲು ಸಿದ್ಧತೆ ನಡೆದಿದೆ. ಕನ್ನಡದ ಮಟ್ಟಿಗೆ ಇದು ಬಿಗ್ ಬಜೆಟ್ ಸಿನಿಮಾ ಅನ್ನೋದು ಮೇಕಿಂಗ್ ನೋಡಿದ್ರೆ ಗೊತ್ತಾಗುತ್ತೆ.

ಹಾಗೆ ಮಾತನಾಡುವವರಿಗೆ ನಾನೊಂದು ಗ್ಯಾರಂಟಿ ಕೊಡುತ್ತೇನೆ, 'ಉಗ್ರಂ' ಚಿತ್ರಕ್ಕೂ ಇದಕ್ಕೂ ಕೂದಲೆಳೆಯಷ್ಟು ಲಿಂಕ್ ಇಲ್ಲ. ಅದೇ ಬೇರೆ, ಇದೇ ಬೇರೆ. ನಾವು ಕೂಡ ಮನುಷ್ಯರೇ. ಬಹುದೊಡ್ಡ ಪರಿಣಿತರಲ್ಲ. ಕೆಲವೊಂದು ಛಾಯೆ ನಮಗೆ ಗೊತ್ತಿಲ್ಲದೆ ಕಾಣಿಸಿಕೊಂಡ ತಕ್ಷಣ ಅದು ಇನ್ನೊಂದರ ಕಾಪಿ ಅಥವಾ ಮುಂದುವರೆದ ಭಾಗ ಅಂತೇಳಿ, ಟೀಕಿಸುವುದು, ಟಿಪ್ಪಣಿ ಮಾಡುವುದು ತುಂಬಾ ಸುಲಭ. ಮೇಕಿಂಗ್ ಹಂತದಲ್ಲಿ ಒಂದು ಚಿತ್ರತಂಡದ ಶ್ರಮಕ್ಕೆ ಬೆಲೆ ಕಟ್ಟಲಾಗದು. ಎಚ್ಚರ ತಪ್ಪಿದರೆ ಅಪಾಯಗಳು ಇರುತ್ತವೆ. ಅವೆಲ್ಲ ಸವಾಲುಗಳ ನಡುವೆ ನಮ್ಮ ಕಲ್ಪನೆಯ ಕಥೆಗೆ ಜೀವ ತುಂಬಬೇಕಾಗುತ್ತದೆ.ಯಶ್ ಈ ಸಿನಿಮಾವನ್ನು ಅವರು ಹೋಮ್ ಬ್ಯಾನರ್ ಸಿನಿಮಾ ಎನ್ನುವ ಹಾಗೆ ಪ್ರೀತಿಸಿ, ಕಾಳಜಿ ವಹಿಸಿ ಅಭಿನಯಿಸುತ್ತಿದ್ದಾರೆ. ಸೆಟ್ ನಲ್ಲಿ ತಾವೊಬ್ಬ ಸ್ಟಾರ್ ನಟ ಎನ್ನುವ ಆಯಟಿಟ್ಯೂಡ್ ತೋರಿಸಿಲ್ಲ. ಕತೆ, ಚಿತ್ರಕತೆ ಜತೆಗೆ ಸಂಭಾಷಣೆ ಹೀಗೆ ಇದ್ದರೆ ಚೆನ್ನ ಎನ್ನುವುದರಿಂದ ಹಿಡಿದು, ಸೆಟ್ ಹೀಗೆ ಹಾಕಿದರೆ ಚೆನ್ನಾಗಿರುತ್ತೆ ಎನ್ನುವಷ್ಟರ ಮಟ್ಟಿಗೆ ಚಿತ್ರೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಾಯಕಿ ಶ್ರೀನಿಧಿ ಶೆಟ್ಟಿ, ಅನಂತ್ ನಾಗ್,ಅಚ್ಯುತ್ ಕುಮಾರ್, ವಶಿಷ್ಠ ಸಿಂಹ, ನಾಜರ್ ಈ ಚಿತ್ರದ ಪ್ರಮುಖ ಪಾತ್ರಧಾರಿಗಳು. ಅವರೆಲ್ಲ ಸಹಕಾರ ಮರೆಯಲಾಗದು.

ಕೆಲವರು ಸಿನಿಮಾ ಇಷ್ಟರಲ್ಲಿಯೇ ತೆರೆಗೆ ಬರಬೇಕಿತ್ತು ಅಂತಲೂ ಹೇಳುತ್ತಾರೆ. ಆದರೆ, ನಮಗೆ ಆ ರೀತಿಯ ಅವಸರ ಇಲ್ಲ. ನಿರ್ಮಾಪಕರ ನಿರೀಕ್ಷೆಗೆ ತಕ್ಕಂತೆ ನಾವು ಸಿನಿಮಾವನ್ನು ತೆರೆಗೆ ತರಬೇಕಿದೆ. ಗುಣಮಟ್ಟದ ಸಿನಿಮಾ ಕೊಡಬೇಕು ಅನ್ನೋದು ನನ್ನ ಕೆಲಸ. ಇನ್ನೇನು ಶೇಕಡ 10 ರಿಂದ 15 ರಷ್ಟು ಭಾಗದ ಚಿತ್ರೀಕರಣ ಮಾತ್ರ ಬಾಕಿ ಇದೆ. ಮಾರ್ಚ್ ಮೊದಲ ವಾರದ ಹೊತ್ತಿಗೆ ಅದು ಕಂಪ್ಲೀಟ್ ಆಗಲಿದೆ. ಆನಂತರ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗುತ್ತೆ. ಆ ಹೊತ್ತಿಗೆ ಎಲೆಕ್ಷನ್ ಬರುವುದು ಖಚಿತ. ಅದೆಲ್ಲ ಮುಗಿದ ನಂತರವೇ ಚಿತ್ರ ತೆರೆ ಕಾಣುವ ಸಾಧ್ಯತೆಗಳಿವೆ. ಎಪ್ರಿಲ್, ಮೇ ಸಮಯ ಕೆಜಿಎಫ್ ತೆರೆ ಕಾಣಲಿದೆ.ಪ್ರತಿಯೊಂದನ್ನು ತುಂಬಾ ಎಚ್ಚರಿಕೆಯಿಂದ ತೆರೆಗೆ ತರುವಾಗ ಈ ಸಮಯ ಬೇಕು ಅನಿಸುತ್ತೆ. ಯಾಕಂದ್ರೆ ಕಥೆಯೇ ಹಾಗಿದೆ. ಅದಕ್ಕೆ ಪೂರಕವಾಗಿ ಸಿದ್ಧತೆ ಮಾಡಿಕೊಂಡು ಚಿತ್ರೀಕರಿಸುತ್ತಿದ್ದೇವೆ. ಸೆಟ್ ಹಾಕುವುದಕ್ಕಾಗಿಯೇ ಒಂದಷ್ಟು ಸಮಯ ಕಳೆದಿದೆ. ಜತೆಗೆ ಇದೊಂದು ಅದ್ಧೂರಿ ವೆಚ್ಚದ ಸಿನಿಮಾ. ನಿರ್ಮಾಪಕರು ನಮ್ಮ ಮೇಲೆ ವಿಶ್ವಾಸವಿಟ್ಟು, ಕಥೆಗೆ ತಕ್ಕಂತೆ ದೊಡ್ಡ ಮಟ್ಟದ ಬಂಡವಾಳ ಹೂಡಿದ್ದಾರೆ. ಅವರು ನಮ್ಮಮೇಲಿಟ್ಟಿರುವ ವಿಶ್ವಾಸ ಹುಸಿ ಆಗದಂತೆ ನೋಡಿಕೊಳ್ಳಬೇಕಾದರೆ, ಅಷ್ಟೇ ಎಚ್ಚರಿಕೆಯಿಂದ ಸಿನಿಮಾ ಮಾಡುವುದು ನಮ್ಮ ಕೆಲಸ. ಅಷ್ಟೇ ಅಲ್ಲ, ಅರ್ಜೆಂಟ್ ಬೇಡ, ಎಲ್ಲವೂ ಅಚ್ಚುಕಟ್ಟಾಗಿ ಬರಲಿ, ಕ್ವಾಲಿಟಿ ಇಂಟರ್ ನ್ಯಾಷನಲ್ ಗ್ರೇಡ್ ನಲ್ಲಿರಲಿ ಅಂತ ನಿರ್ಮಾಪಕರೇ ಹೇಳುವಾಗ ಅರ್ಜೆಂಟ್ ಮಾಡುವ ಅಗತ್ಯ ನಮಗಿಲ್ಲ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದರು.

Edited By

Shruthi G

Reported By

Shruthi G

Comments