ಸಂಜಯ್ ಲೀಲಾ ಬನ್ಸಾಲಿಗೆ ಕೊನೆಗೂ ಸಿಕ್ತು 'ಬಿಗ್' ರಿಲೀಫ್

03 Feb 2018 12:53 PM | Entertainment
386 Report

ಪದ್ಮಾವತ್ ಚಿತ್ರದಲ್ಲಿ ರಜಪೂತರ ಶೌರ್ಯ, ಸಾಹಸ ಮತ್ತು ಬಲಿದಾನವನ್ನು ಅತ್ಯಂತ ಹೃದಯಂಗಮವಾಗಿ ಚಿತ್ರಿಸಲಾಗಿದ್ದು, ಈ ಚಿತ್ರವನ್ನು ನೋಡುವ ಪ್ರತಿಯೋರ್ವ ರಜಪೂತನಿಗೆ ಹೆಮ್ಮೆ ತರುವಂತಿದೆ ಎಂದು ಕರ್ಣಿ ಸೇನೆ ಚಿತ್ರದ ವಿರುದ್ಧದ ತನ್ನ ಪ್ರತಿಭಟನೆ ಮತ್ತು ಬಹಿಷ್ಕಾರವನ್ನು ಹಿಂದೆಗೆದುಕೊಳ್ಳುವ ನಿರ್ಧಾರವನ್ನು ಪ್ರಕಟಿಸುವಾಗ ಹೇಳಿದೆ.

ಶ್ರೀ ರಜಪೂತ ಕರ್ಣಿ ಸೇನೆಯ ಮುಂಬಯಿ ನಾಯಕ ಯೋಗೇಂದ್ರ ಸಿಂಗ್ ಕಟಾರ್ ಅವರು ಸಂಘಟನೆಯ ರಾಷ್ಟ್ರಾಧ್ಯಕ್ಷ ಸುಖದೇವ್ ಸಿಂಗ್ ಗೋಗಮಡಿ ಅವರ ನಿರ್ದೇಶದ ಪ್ರಕಾರ, ಈ ನಿರ್ಧಾರವನ್ನು ಪ್ರಕಟಿಸಿದರು. "ನಮ್ಮ ಸಂಘಟನೆಯ ಕೆಲ ಸದಸ್ಯರು ಪದ್ಮಾವತ್ ಚಿತ್ರವನ್ನು ಮುಂಬಯಿಯಲ್ಲಿ ವೀಕ್ಷಿಸಿದರು. ಚಿತ್ರದಲ್ಲಿ ರಜಪೂತರ ಧೈರ್ಯ, ಶೌರ್ಯ, ಸಾಹಸ ಮತ್ತು ಬಲಿದಾನಗಳನ್ನು ವಿಜೃಂಭಿಸಲಾಗಿರುವುದನ್ನು ಕಂಡುಕೊಂಡರು. ಈ ಚಿತ್ರ ವೀಕ್ಷಿಸುವ ಪ್ರತಿಯೋರ್ವ ರಜಪೂತ ವ್ಯಕ್ತಿಯು ತನ್ನ ಸಮುದಾಯದ ಬಗ್ಗೆ, ರಜಪೂತ ಇತಿಹಾಸದ ಬಗ್ಗೆ ಹೆಮ್ಮೆ ಪಡುವಂತಾಗಿದೆ' ಎಂದವರು ಹೇಳಿದರು. "ದಿಲ್ಲಿ ಸುಲ್ತಾನ ಅಲ್ಲಾವುದ್ದೀನ್ ಖಲ್ಜಿ ಮತ್ತು ರಾಣಿ ಪದ್ಮಾವತಿ ನಡುವಿನ ಯಾವುದೇ ದೃಶ್ಯಾವಳಿಗಳು ಆಕ್ಷೇಪಾರ್ಹವಾಗಿಲ್ಲ; ಕರ್ಣಿ ಸೇನೆ ತನ್ನ ಪ್ರತಿಭಟನೆ ಮತ್ತು ಚಿತ್ರದ ಮೇಲಿನ ತನ್ನ ಬಹಿಷ್ಕಾರವನ್ನು ಹಿಂದೆಗೆದುಕೊಳ್ಳುತ್ತಿದೆಯಲ್ಲದೆ ಈ ಚಿತ್ರವನ್ನು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಗುಜರಾತ್ ಮಾತ್ರವಲ್ಲದೆ ದೇಶಾದ್ಯಂತ ಎಲ್ಲಿಯೂ ತೆರೆಕಾಣುವುದಕ್ಕೆ ನಮ್ಮ ಸಂಘಟನೆ ಪೂರ್ತಿ ನೆರವು ನೀಡುತ್ತದೆ' ಎಂದು ಕರ್ಣಿ ಸೇನೆ ಬರೆದಿರುವ ಪತ್ರದಲ್ಲಿ ಸ್ಪಷ್ಟಪಡಿಸಿದೆ. ಕಳೆದ ಜನವರಿ 25ರಂದು ತೆರೆಕಂಡಿದ್ದ ಪದ್ಮಾವತ್ ಚಿತ್ರವು ದೇಶ, ವಿದೇಶಗಳಲ್ಲಿ ಭಾರೀ ಜನಪ್ರಿಯವಾಗಿ ಉತ್ತಮ ಬಾಕ್ಸ್ ಆಫೀಸ್ ಗಳಿಕೆಯನ್ನು ದಾಖಲಿಸುತ್ತಿದೆ. ಚಿತ್ರದ ಪ್ರಧಾನ ಭೂಮಿಕೆಯಲ್ಲಿ ದೀಪಿಕಾ ಪಡುಕೋಣೆ, ಶಾಹೀದ್ ಕಪೂರ್, ರಣವೀರ್ ಸಿಂಗ್ ಇದ್ದಾರೆ.

Edited By

Shruthi G

Reported By

Madhu shree

Comments