ಪಾರ್ವತಮ್ಮ ರಾಜಕುಮಾರ್ ಆರೋಗ್ಯ ಸ್ಥಿತಿ ಗಂಭೀರ, ವೆಂಟಿಲೇಟರ್ ಅಳವಡಿಕೆ

18 May 2017 2:53 PM | Entertainment
717 Report

ನಟ ಸಾರ್ವಭೌಮ ಡಾ. ರಾಜಕುಮಾರ್ ಅವರ ಧರ್ಮಪತ್ನಿ ಪಾರ್ವತಮ್ಮ ರಾಜಕುಮಾರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಪಾರ್ವತಮ್ಮ ರಾಜಕುಮಾರ್ ಅವರು ನಗರದ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ರಾತ್ರಿಯಿಂದ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ವೆಂಟಿಲೇಟರ್ ಅಳವಡಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪಾರ್ವತಮ್ಮ ರಾಜಕುಮಾರ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಪುತ್ರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಸೇರಿದಂತೆ ಕುಟುಂಬ ವರ್ಗ ಆಸ್ಪತ್ರೆಯಲ್ಲಿ ಸೇರಿದ್ದರು.

ನಂತರ ಸುದ್ದಿಗೋಷ್ಠಿ ನಡೆಸಿದ ಶಿವರಾಜ್ ಕುಮಾರ್ ಹಾಗೂ ವೈದ್ಯರು ಸದ್ಯ ಪಾರ್ವತಮ್ಮ ಅವರ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿದ್ದು ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ವೆಂಟಿಲೇಟರ್ ನಿಂದ ಹೊರಬಂದ ನಂತರ ಅವರ ಪರಿಸ್ಥಿತಿ ತಿಳಿಯಲಿದೆ ಎಂದು ವೈದ್ಯರು ತಿಳಿಸಿದರು. 

ಇದೇ ವೇಳೆ ಮಾತನಾಡಿದ ಶಿವರಾಜ್ ಕುಮಾರ್ ಅವರು, ತಾಯಿಗೆ ಉಸಿರಾಟದ ಸಮಸ್ಯೆ ಎದುರಾಗಿದ್ದರಿಂದ ಅವರಿಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸುಧಾರಣೆಗಾಗಿ ವೈದ್ಯರು ಶ್ರಮಪಡುತ್ತಿದ್ದಾರೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ಊಹಾಪೋಹಗಳಿಗೂ ಕಿವಿಕೊಡಬೇಡಿ ಎಂದು ಹೇಳಿದ್ದಾರೆ.  ಇನ್ನು ಸೂಕ್ತ ಭದ್ರತೆಗಾಗಿ ಆಸ್ಪತ್ರೆ ಸುತ್ತ ಪೊಲೀಸರನ್ನು ನಿಯೋಜಿಸಲಾಗಿದೆ. 

 

Edited By

Shruthi G

Reported By

Shruthi G

Comments