120 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮೂರು ವರ್ಷದ ಬಾಲಕ
ಪಾಳುಬಿದ್ದ ಕೊಳವೆ ಬಾವಿಗೆ ಪುಟ್ಟ ಮಕ್ಕಳು ಬಿದ್ದು ಸಾಯುವ ಪ್ರಕರಣ ಕೊನೆಯಾಗುತ್ತಲೇ ಇಲ್ಲ. ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ 120 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ 3 ವರ್ಷದ ಮಗು ಸತತ ಪ್ರಯತ್ನಗಳು ವಿಫಲವಾಗಿದ್ದರಿಂದ ಮೃತಪಟ್ಟ ಘಟನೆ ತೆಲಂಗಾಣದ ಮೆಡಕ್ ಜಿಲ್ಲೆಯ ಪಪನ್ನಪೆಟ್ ಮಂಡಲ್ ಸಮೀಪ ಪೊಡ್ಚನಂಪಲ್ಲಿ ಗ್ರಾಮದಲ್ಲಿ ಸಂಭವಿಸಿದೆ.
ಬುಧವಾರ ಸಂಜೆ ತನ್ನ ಅಜ್ಜ ಮತ್ತು ಅಪ್ಪನೊಂದಿಗೆ ಹೊಲದಲ್ಲಿ ಓಡಾಡುತ್ತಿದ್ದ ಬಾಲಕ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದಾನೆ. ಕೂಡಲೇ ತಾಯಿ ತಾನು ಉಟ್ಟಿದ್ದ ಸೀರೆಯನ್ನು ಕಳಚಿ ಕೊಳವೆ ಬಾವಿಯೊಳಗೆ ಇಳಿಸಿ ಮಗು ಅದನ್ನು ಹಿಡಿದುಕೊಂಡು ಮೇಲೆ ಬರಬಹುದು ಎಂದು ಪ್ರಯತ್ನಪಟ್ಟಳು. ಆದರೆ ಸಾಧ್ಯವಾಗಲಿಲ್ಲ. ಮಗು ಆಗಲೇ ಬಾವಿಯೊಳಗೆ ಬಹಳ ಆಳದವರೆಗೆ ಹೋಗಿದ್ದು ಸೀರೆಯನ್ನು ಹಿಡಿದು ಎಳೆಯಲು ಸಾಧ್ಯವಾಗಲಿಲ್ಲ. 17 ಅಡಿ ಆಳಕ್ಕೆ ಮಗು ಆಗಲೇ ಜಾರಿ ಬಿದ್ದು ಹೋಗಿತ್ತು. ಬಾಲಕನ ಕುಟುಂಬ ಇತ್ತೀಚೆಗಷ್ಟೇ ಹೊಲದಲ್ಲಿ ಮೂರು ಕೊಳವೆಬಾವಿಗಳನ್ನು ಕೊರೆಸಿತ್ತು. ಆದರೆ, ಒಂದರಲ್ಲಿಯೂ ನೀರು ಸಿಕ್ಕಿರಲಿಲ್ಲ. ವಿಫಲವಾದ ಕೊಳವೆಬಾವಿಗಳನ್ನು ಮುಚ್ಚದೇ ಇದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಬಾಲಕನನ್ನು ರಕ್ಷಿಸಲು ಅಧಿಕಾರಿಗಳು ಇನ್ನಿಲ್ಲದಂತೆ ಪ್ರಯತ್ನಿಸಿದ್ದರು. ಆದರೆ ಎಲ್ಲರ ಶ್ರಮ ಮತ್ತು ಪ್ರಾರ್ಥನೆ ಫಲಿಸಲಿಲ್ಲ. ರಕ್ಷಣಾ ಕಾರ್ಯಾಚರಣೆ ಸುಮಾರು 12 ಗಂಟೆಗಳ ಕಾಲ ಮುಂದುವರೆಯಿತಾದರೂ ಮಗು ಬದುಕಿ ಬರಲಿಲ್ಲ.
Comments