ಕಲಾಸಿಪಾಳ್ಯ ಬೆಂಕಿ ದುರಂತದಲ್ಲಿ ಮೃತಪಟ್ಟವರಿಗೆ ತಲಾ 5 ಲಕ್ಷ ಪರಿಹಾರ

08 Jan 2018 3:42 PM | Crime
332 Report

ಇಂದು ಮುಂಜಾನೆ ಕೆ.ಆರ್.ಮಾರುಕಟ್ಟೆಯ ಕೈಲಾಶ್ ಬಾರ್‍ನಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದ ಸಾವನ್ನಪ್ಪಿದ ಕುಟುಂಬದವರಿಗೆ ಬಿಬಿಎಂಪಿ ವತಿಯಿಂದ ಐದು ಲಕ್ಷ ಪರಿಹಾರ ಘೋಷಿಸಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತರ ಕುಟುಂಬಗಳಿಗೆ ಬಿಬಿಎಂಪಿಯಿಂದ 5 ಲಕ್ಷ ರೂ. ಪರಿಹಾರ ನೀಡುವುದಾಗಿ ತಿಳಿಸಿದರು.

ತುಮಕೂರು ನಿವಾಸಿಗಳಾದ ಸ್ವಾಮಿ, ಪ್ರಸಾದ್, ಮಹೇಶ್ ಹಾಗೂ ಹಾಸನದ ಮಂಜುನಾಥ್ ಮತ್ತು ಮಂಡ್ಯದ ಕೀರ್ತಿ ಎಂಬುವರು ಮೃತಪಟ್ಟಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಈ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಎಂದು ಹೇಳಿದರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವಗಳನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗುವುದು. ಈ ಘಟನೆ ನಡೆದಿರುವುದು ಅತ್ಯಂತ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮುಂದೆ ಈ ರೀತಿ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು. ಯಾವ ಕಾರಣಕ್ಕಾಗಿ ಸಾವನ್ನಪ್ಪಿದ್ದಾರೆ ಎಂಬುದು ತಿಳಿದಿಲ್ಲ.

ಬಾರ್‍ನಲ್ಲಿ ಶಾರ್ಟ್ ಸಕ್ರ್ಯೂಟ್ ಉಂಟಾಗಿತ್ತೆ ಇಲ್ಲವೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆಯೇ ಎಂಬುದು ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಗೊತ್ತಾಗಲಿದೆ. ಇದು ತುಂಬ ಹಳೆಯ ಕಟ್ಟಡವಾಗಿರುವುದರಿಂದ ಒಂದೇ ಬಾಗಿಲು ಇರುವ ಕಾರಣ ಘಟನೆ ನಡೆದ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದರು. ಇಂತಹ ಕಟ್ಟಡಗಳಲ್ಲಿ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಲೈಸೆನ್ಸ್ ನವೀಕರಣ ಮಾಡುವ ವೇಳೆ ನಿಯಮಗಳನ್ನು ಪಾಲನೆ ಮಾಡುವುದಾಗಿ ಮಾಲೀಕರು ಹೇಳಿದ್ದರು. ಬಾರ್‍ನಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಎಂಬುದರ ಬಗ್ಗೆ ತನಿಖೆಯ ನಂತರವೇ ತಿಳಿಯಲಿದೆ. ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಜರುಗಿಸುವುದಾಗಿ ಸಚಿವ ಜಾರ್ಜ್ ಹೇಳಿದರು.

Edited By

Shruthi G

Reported By

Madhu shree

Comments