ಡಿವೈಎಸ್ಪಿ ಗಣಪತಿ ಪ್ರಕರಣ : ಸಿಬಿಐಗೆ ವಿಸ್ತೃತ ವರದಿ ಹಸ್ತಾಂತರ

26 Oct 2017 6:10 PM | Crime
507 Report

ರಾಜ್ಯಾದ್ಯಂತ ಭಾರೀ ವಿವಾದವನ್ನೇ ಸೃಷ್ಟಿಸಿ ಸರ್ಕಾರಕ್ಕೆ ಇರಿಸು-ಮುರಿಸು ಉಂಟು ಮಾಡಿದ್ದ ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಐಡಿ ತನಿಖಾ ತಂಡ ಇಂದು ಸಿಬಿಐಗೆ ವಿಸ್ತೃತ ವರದಿಯನ್ನು ಹಸ್ತಾಂತರ ಮಾಡಿದೆ. ಈಗಾಗಲೇ ಸುಪ್ರೀಂಕೋರ್ಟ್ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸೂಚಿಸಿತ್ತು.

ಸಿಐಡಿ ಡಿಜಿಪಿ ಕಿಶೋರ್ ಚಂದ್ರ ಅವರ ಸೂಚನೆಯಂತೆ ಸಿಐಡಿ ಡಿವೈಎಸ್ಪಿ ಶ್ರೀಧರ್ ಇಂದು ಬೆಳಗ್ಗೆ ಚೆನ್ನೈಗೆ ತೆರಳಿ ಸಿಬಿಐನ ಅಧಿಕಾರಿಗಳಿಗೆ ವರದಿಯನ್ನು ಹಸ್ತಾಂತರಿಸಲಿದ್ದಾರೆ. ಈ ಹಿಂದೆ ಗಣಪತಿ ಸಾವಿನ ಪ್ರಕರಣವನ್ನು ತನಿಖೆ ನಡೆಸಿದ್ದ ಸಿಐಡಿ ಇದರಲ್ಲಿ ಸಚಿವ ಕೆ.ಜೆ.ಜಾರ್ಜ್, ಹಿರಿಯ ಐಎಎಸ್ ಅಧಿಕಾರಿ ಎ.ಎನ್.ಪ್ರಸಾದ್, ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ಪಾತ್ರವಿಲ್ಲ ಎಂದು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದೆ. ಆದರೆ ಸಿಐಡಿಯ ವರದಿಯನ್ನು ಒಪ್ಪದ ಗಣಪತಿ ಕುಟುಂಬದ ಸದಸ್ಯರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.ಕೆಲವರ ಕಿರುಕುಳದಿಂದಲೇ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಗಣಪತಿ ಅವರ ತಂದೆ ಎಂ.ಕೆ.ಕುಶಾಲಪ್ಪ ಆರೋಪಿಸಿದ್ದರು. ಎರಡೂ ಕಡೆ ವಾದ-ವಿವಾದ ಆಲಿಸಿದ್ದ ಸುಪ್ರೀಂಕೋರ್ಟ್ ಅಂತಿಮವಾಗಿ ಸಿಬಿಐ ತನಿಖೆಗೆ ಆದೇಶ ನೀಡಿತ್ತು. ಸಿಐಡಿ ತನಿಖಾ ತಂಡ ಇಂದು ವರದಿಯನ್ನು ಸಿಬಿಐಗೆ ಹಸ್ತಾಂತರ ಮಾಡಿರುವುದರಿಂದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಗುಪ್ತಚರ ವಿಭಾಗದ ಪ್ರಸಾದ್, ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ಸೇರಿದಂತೆ ಕೆಲವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.ಸಿಐಡಿ ವರದಿ ಆಧಾರದ ಮೇಲೆ ಸಿಬಿಐ ಜಾರ್ಜ್ ವಿರುದ್ಧ ಎಫ್‍ಐಆರ್ ದಾಖಲಿಸಿದರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಅನಿವಾರ್ಯತೆ ಎದುರಾಗಲಿದೆ. ಈ ಹಿಂದೆ ಗಣಪತಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಸಾವಿಗೆ ಅಂದಿನ ಗೃಹ ಸಚಿವ ಕೆ.ಜೆ.ಜಾರ್ಜ್, ಅಧಿಕಾರಿಗಳಾದ ಪ್ರಸಾದ್ ಮತ್ತು ಮೊಹಂತಿ ಕಾರಣ ಎಂದು ಸ್ಥಳೀಯ ಸುದ್ದಿವಾಹಿನಿ ಮೂಲಕ ಬಹಿರಂಗಪಡಿಸಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿತ್ತು. ಮಡಿಕೇರಿ ಜಿಲ್ಲಾ ನ್ಯಾಯಾಲಯದ ಸೂಚನೆಯಂತೆ ಪೊಲೀಸರು ಮೂವರ ವಿರುದ್ಧ ದೂರು ದಾಖಲಿಸಿದ್ದರು. ಇತ್ತ ದೂರು ದಾಖಲಾಗುತ್ತಿದ್ದಂತೆ ಜಾರ್ಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಸಿಐಡಿ ತನಿಖೆ ನಡೆಸಿದ ಬಳಿಕ ಅವರ ಪಾತ್ರವಿಲ್ಲ ಎಂಬುದು ಸಾಬೀತಾದ ನಂತರ ಪುನಃ ಸಂಪುಟಕ್ಕೆ ಜಾರ್ಜ್ ಸೇರ್ಪಡೆಯಾಗಿದ್ದರು. ಇದೀಗ ಸಿಬಿಐ ಪ್ರಕರಣ ಕೈಗೆತ್ತಿಕೊಂಡಿರುವುದರಿಂದ ಮತ್ತೆ ಕಾನೂನಿನ ಸಂಕಷ್ಟ ಎದುರಾಗಿದೆ.

Edited By

Hema Latha

Reported By

Madhu shree

Comments