ನಮಗೆ ಕೊಲೆಗಡುಕರು ಯಾರು ಎಂದು ಗೊತ್ತಿದೆ : ರಾಮಲಿಂಗಾ ರೆಡ್ಡಿ

03 Oct 2017 1:50 PM | Crime
244 Report

ಗೌರಿ ಲಂಕೇಶ್ ಹತ್ಯೆ ಗೆ ಹೊಸ ತಿರುವು ಸಿಕ್ಕಿದೆ . ವಿಶೇಷ ತನಿಖಾ ತಂಡ (ಎಸ್‌ಐಟಿ) ಹಂತಕರನ್ನು ಪತ್ತೆ ಹಚ್ಚಿದ್ದು, ಅಪರಾಧ ಸಾಬೀತು ಪಡಿಸಲು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದೇವೆ. ನಮಗೆ ಸುಳಿವುಗಳು ಸಿಕ್ಕಿವೆ, ಆದರೆ ಅದನ್ನು ಈಗ ಮಾಧ್ಯಮಗಳಿಗೆ ಹೇಳಲು ಸಾಧ್ಯವಿಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್ ಹಂತಕರನ್ನು ಪತ್ತೆ ಹಚ್ಚಲಾಗಿದೆ. ಆದರೆ ಸಾಕ್ಷ್ಯಗಳಿಗಾಗಿ ನಾವೀಗ ಹುಡುಕಾಡುತ್ತಿದ್ದೇವೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ನಮಗೆ ಕೊಲೆಗಡುಕರು ಯಾರು ಎಂದು ಗೊತ್ತಿದೆ ಎಂದಿರುವ ರಾಮಲಿಂಗಾ ರೆಡ್ಡಿ, ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ. ಮಾಹಿತಿ ನೀಡಿದರೆ ತನಿಖೆಗೆ ತೊಂದರೆಯಾಗಬಹುದು ಎಂದು ಅವರು ಇದಕ್ಕೆ ಸಮಜಾಯಿಷಿ ನೀಡಿದ್ದಾರೆ.  ಸುಳಿವುಗಳಿಗೆ ಸಂಬಂಧಿಸಿದಂತೆ ನಾವು ಸೂಕ್ತ ಸಾಕ್ಷ್ಯಗಳನ್ನು ಕಲೆ ಹಾಕಬೇಕಾಗಿದೆ, ಎಂದು ಅವರು ಚಿಕ್ಕಬಳ್ಳಾಪುರದಲ್ಲಿ ಹೇಳಿಕೆ ನೀಡಿದ್ದಾರೆ. ಕಳೆದ ತಿಂಗಳು ಅಂದರೆ ಸೆಪ್ಟೆಂಬರ್ 5ರಂದು ತೀರಾ ಹತ್ತಿರದಿಂದ ಗೌರಿ ಲಂಕೇಶ್ ರನ್ನು ರಾಜರಾಜೇಶ್ವರಿ ನಗರದ ಮನೆಯ ಮುಂಭಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದಾದ ನಂತರ ತನಿಖೆಗಾಗಿ ಎಸ್‌ಐಟಿ ರಚನೆ ಮಾಡಲಾಗಿತ್ತು. ಜತೆಗೆ ಹಂತಕರ ಸುಳಿವು ನೀಡಿದವರಿಗೆ ರಾಜ್ಯ ಸರಕಾರ 10 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಿತ್ತು.

Edited By

Suresh M

Reported By

Madhu shree

Comments