ಬೆಂಗಳೂರು ಮಳೆಗೆ ಮೂವರ ಬಲಿ : 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ

09 Sep 2017 10:12 AM | Crime
351 Report

ಬೆಂಗಳೂರು : ಮೂವರ ದುರ್ಮರಣ: ಶುಕ್ರವಾರ ಸಂಜೆಯಿಂದ ತಡರಾತ್ರಿವರೆಗೂ ಸುರಿದ ವರ್ಷಧಾರೆಗೆ ಬೆಂಗಳೂರು ಮಹಾನಗರಿ ತತ್ತರಿಸಿ ಹೋಗಿದೆ. ಮಹಾ ಮಳೆಗೆ ಬೃಹತ್ ಮರ ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಮಿನರ್ವ ಸರ್ಕಲ್ ಬಳಿ ಮಳೆ ಬರ್ತಿದ್ದ ಕಾರಣ ಮರದ ಕೆಳಗೆ ಕಾರ್ ನಿಲ್ಲಿಸಿದ್ರು.ಈ ವೇಳೆ ಮರ ಬಿದ್ದು ಸಾವನ್ನಪ್ಪಿದ್ದಾರೆ.

ಮೃತರಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ್ದು, ಇಬ್ಬರಿಗೆ ಉದ್ಯೋಗ ನೀಡುವುದಾಗಿ ಸಚಿವ ಜಾರ್ಜ್ ಹೇಳಿದ್ದಾರೆ.

ಎಡಬಿಡದೆ ಸುರಿದ ಮಳೆಗೆ ಬೆಂಗಳೂರಿನ ಬಹುತೇಕ ಭಾಗಗಳು ಸಂಪೂರ್ಣ ಜಲಾವೃತವಾಗಿದ್ದವು. ಮನೆಗಳಿಗೆ ನೀರು ನುಗ್ಗಿತ್ತು. ರಸ್ತೆಗಳು ನದಿಗಳಾಗಿದ್ದವು. ಕಿಲೋ ಮೀಟರ್‍ಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ವಾಹನ ಸವಾರರು ಪರದಾಡಿ ಹೋದ್ರು.ಹವಾಮಾನ ಇಲಾಖೆಯ ಪ್ರಕಾರ ಇನ್ನು 2 ದಿನ ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಮೆಜೆಸ್ಟಿಕ್, ಮಾರ್ಕೆಟ್, ಶಿವಾಜಿನಗರ, ಮಲ್ಲೇಶ್ವರಂ, ಮತ್ತಿಕೆರೆ, ಯಶವಂತಪುರ, ಆರ್‍ಟಿನಗರ, ಹೆಬ್ಬಾಳ, ಕೆ.ಆರ್.ಪುರ, ವೈಟ್‍ಫೀಲ್ಡ್, ಮಹದೇವಪುರ, ಕಾಡುಗೋಡಿ, ಜಯನಗರ, ರಾಜಾಜಿನಗರ, ಕೋರಮಂಗಲ, ಬೆಳ್ಳಂದೂರು, ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಮೈಸೂರು ರಸ್ತೆ, ಕೆಂಗೇರಿ, ಕಮ್ಮನಹಳ್ಳಿ, ಪುಲಿಕೇಶಿನಗರ, ಬಸವನಗುಡಿ, ಆವಲಹಳ್ಳಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ.

ಮಾರಕ ರೋಗ ಕ್ಯಾನ್ಸರನ್ನು ಗೆದ್ದಿದ್ದ ಭಾರತಿ ಸಾವನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ,ನಿನ್ನೆ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆ ಸಂದರ್ಭದಲ್ಲಿ ತಾವು ಇದ್ದ ಕಾರಿನ ಮೇಲೆ ಭಾರೀ ಗಾತ್ರದ ಮರಬಿದ್ದು ತನ್ನ ತಮ್ಮ, ತಾನು ಪ್ರೀತಿಸಿ ಮದುವೆಯಾಗಿದ್ದ ಪತಿಯೊಂದಿಗೆ ಇಹಲೋಕ ತ್ಯಜಿಸಿದ್ದಾರೆ. 23 ವರ್ಷಗಳ ಹಿಂದೆ ರಮೇಶ್-ಭಾರತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಪತ್ನಿಗೆ ಕ್ಯಾನ್ಸರ್ ಇದೆ ಎಂದು ಗೊತ್ತಾದಾಗ ಆಕಾಶವೇ ಕಳಚಿ ಬಿದ್ದಂತಾಗಿತ್ತು. ಆದರೆ ಧೃತಿಗೆಡದೆ 8 ಲಕ್ಷ ಸಾಲ ಮಾಡಿ ರಮೇಶ್,ತನ್ನ ಪತ್ನಿ ಕ್ಯಾನ್ಸರ್ ಗುಣಪಡಿಸಿದ್ದರು. ಕ್ಯಾನ್ಸರ್ ರೋಗದಿಂದ ಭಾರತಿ ಗೆದ್ದಿದ್ದರು. ಕುಟುಂಬದ ನಿರ್ವಹಣೆ ಮತ್ತು ಸಾಲಕ್ಕಾಗಿ ಕಳೆದ ಮೂರು ವರ್ಷಗಳಿಂದ ಗೃಹರಕ್ಷಕ ದಳದಲ್ಲಿ ಕೆಲಸ ಮಾಡುತ್ತಿದ್ದರು. ರಾಹುಲ್ ಮತ್ತು ರೋಹಿತ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

 

Edited By

Shruthi G

Reported By

Shruthi G

Comments