ಶರತ್ ಮಡಿವಾಳ ಹತ್ಯೆ ಪ್ರಕರಣ, ಮತ್ತಿಬ್ಬರು ಆರೋಪಿಗಳ ಬಂಧನ

19 Aug 2017 3:12 PM | Crime
538 Report

ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇನ್ನೊಂದು ಮಹತ್ವದ ಯಶಸ್ಸು ದೊರೆತಿದೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ದಕ್ಷಿಣಕನ್ನಡ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸುಹೇಲ್ ಹಾಗೂ ಸಾದಿಕ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಹಾಸನ ಜಿಲ್ಲೆಯಲ್ಲಿ ಇದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಮಂಗಳೂರಿನ ಪೊಲೀಸ್ ತಂಡ ಇವರಿಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಬಂಧಿತ ಆರೋಪಿಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.ಬಂಧಿತರು ಶರತ್ ಮಡಿವಾಳ ಹತ್ಯೆ ನಡೆಸಿದ ಪ್ರಮುಖ ಆರೋಪಿಗಳಿಗೆ ಆಶ್ರಯ ನೀಡಿ ಸಹಕರಿಸಿದ್ದು, ಹತ್ಯೆ ಪ್ರಕರಣದ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಜುಲೈ 4ರಂದು ರಾತ್ರಿ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಬಳಿ ತನ್ನ ಲಾಂಡ್ರಿ ಅಂಗಡಿಯ ಬಾಗಿಲು ಹಾಕಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಶರತ್ ಅವರ ಮೇಲೆ ಮಾರಕಾಸ್ತ್ರಗಳಿಂದ ಕಡಿದು ಪರಾರಿಯಾಗಿದ್ದರು.ಈ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಶರತ್ ಮಡಿವಾಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಈ ಹತ್ಯೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಶಾಂತಿಯ ವಾತಾವರಣ ನಿರ್ಮಾಣವಾಗಿತ್ತು.

Courtesy: oneindia kannada

Comments